ಕುಷ್ಟಗಿ,ಆ.1:ಇಳಕಲ್ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ವ್ಯಸನ ಮುಕ್ತ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಪ್ರಭಾರಿ ತಹಸೀಲ್ದಾರ್ ಮುರಲೀಧರ ಮುಕ್ತೇದಾರ ಅವರು ಹಾಗೂ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ದಿನಾಚರಣೆ ಅಂಗವಾಗಿ ವ್ಯಸನಮುಕ್ತ ಸಮಾಜಕ್ಕೆ ಕೊಡುಗೆ ನೀಡಿದ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಾ.ಬಸವಪ್ರಭು ಸುಂಕದ ಅವರು, ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳು ಜನ್ಮ ದಿನವನ್ನು ಸರ್ಕಾರ ಕರ್ನಾಟಕದಲ್ಲಿ ಆಗಸ್ಟ್ 1 ರಂದು ‘ವ್ಯಸನ ಮುಕ್ತ ದಿನಾಚರಣೆ’ಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಟಿ.ಬಸವರಾಜ, ಬಸವ ಸಮಿತಿ ಕಾರ್ಯದರ್ಶಿ ಮಹೇಶ ಜಿ.ಹೆಚ್. ಸೇರಿದಂತೆ ಬಸವ ಸಮಿತಿ ಸದಸ್ಯರು ಹಾಗೂ ಕಂದಾಯ ಇಲಾಖೆ ಕಂದಾಯ ನಿರೀಕ್ಷಕ ಉಮೇಶ ಗೌಡರ್, ದೇವಸ್ಥಾನ ಸಂಕಲನದ ವಿಷಯ ನಿರ್ವಾಹಕ ಸುಂದರ್, ಶಿರಸ್ಥೆದಾರರಾದ ಸತೀಶ, ವಿಜಯಲಕ್ಷ್ಮೀ, ದ್ವಿತೀಯ ದರ್ಜೆ ಸಹಾಯಕ ಚೇತನ್ ಪಿ. ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.