ಸುದ್ದಿಮೂಲ ವಾರ್ತೆ
ತುಮಕೂರು, ಆ.2 : ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆಯಿಂದ ವಂಚಿತವಾಗಿರುವ 5 ವರ್ಷದೊಳಗಿನ ಮಕ್ಕಳಿಗೆ ಇನ್ನೊಂದು ವಾರದೊಳಗೆ ಲಸಿಕೆ ನೀಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಇಂದ್ರಧನುಷ್ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಮೂರು ಸುತ್ತುಗಳಲ್ಲಿ ಆಯೋಜಿಸಲಾಗಿದೆ. ಆ. 7 ರಿಂದ 12ರವರೆಗೆ ಮೊದಲ ಸುತ್ತು, ಎರಡನೇ ಸುತ್ತು ಸೆಪ್ಟೆಂಬರ್ 11 ರಿಂದ 16ರವರೆಗೆ ಹಾಗೂ ಮೂರನೇ ಸುತ್ತನ್ನು ಅಕ್ಟೋಬರ್ 9ರಿಂದ 14ರವರೆಗೆ ನಡೆಯುವ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಹೇಳಿದರು.
ಜಿಲ್ಲೆಯ ಗರ್ಭಿಣಿ ಮಹಿಳೆಯರು ಮತ್ತು 5 ವರ್ಷಗಳ ಮಕ್ಕಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರೊಂದಿಗೆ ಅಂಗನವಾಡಿ ಕಾರ್ಯಕರ್ತರು ಹಂಚಿಕೊಳ್ಳಬೇಕು.
ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಮನೆ ಮನೆ ಭೇಟಿ ನೀಡಿ ಲಸಿಕೆ ಪಡೆಯಬೇಕಾಗಿರುವ, ಪಡೆಯದ, ಬಿಟ್ಟು ಹೋಗಿರುವವರ ಪಟ್ಟಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು.
2ರಿಂದ 5 ವರ್ಷದೊಳಗಿನ ಮಕ್ಕಳು ದಡಾರ-ರುಬೆಲ್ಲಾ-2, ಡಿಪಿಟಿ ಬೂಸ್ಟರ್, ಓಪಿವಿ ಬೂಸ್ಟರ್ ಲಸಿಕೆ ಪಡೆದಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಿದರು.
ಗರ್ಭಿಣಿ ಮಹಿಳೆಯರ ಟಿಡಿ ಲಸಿಕಾಕರಣ ಮತ್ತು ಮಕ್ಕಳ ಲಸಿಕಾಕರಣದ ಕುರಿತು ತಾಯಂದಿರ ಸಭೆಗಳಲ್ಲಿ ಅಭಿಯಾನದದಿನಾಂಕಗಳ ಮಾಹಿತಿ ನೀಡಿ, ಲಸಿಕಾಕರಣದ ಕುರಿತು ಜಾಗೃತಿ ಮೂಡಿಸಬೇಕು.
ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಕೊಳಚೆ ಪ್ರದೇಶಗಳಲ್ಲಿ, ಹೊರವಲಯಗಳಲ್ಲಿ ಅಭಿಯಾನ ನಡೆಸಲು ಮುನ್ಸಿಪಾಲಿಟಿ, ಮಹಾನಗರ ಪಾಲಿಕೆ ಅಧಿಕಾರಿಗಳು ಲಸಿಕಾ ಕಾರ್ಯಪಡೆ ಸಮಿತಿ ರಚಿಸಬೇಕು.
ಈ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಸ ಸಂಗ್ರಹ ಮಾಡುವ ವಾಹನಗಳಲ್ಲಿ ಧ್ವನಿಸುರುಳಿ ಮೂಲಕ ಪ್ರಚುರಪಡಿಸಬೇಕು ಎಂದು ತಿಳಿಸಿದರು.
ಹೊಸದಾಗಿ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಮಾಹಿತಿಯನ್ನು ಪರಿಶೀಲಿಸಿ,ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪೋಷಕರಿಗೆ ಪ್ರೇರೆಪಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಡಿಹೆಚ್ಓ ಡಾ.ಮಂಜುನಾಥ್,ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ, ಆರ್ಸಿಹೆಚ್ ಅಧಿಕಾರಿ ಡಾ. ಕೇಶವರಾಜ್, ಟಿಹೆಚ್ಓ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.