ನವದೆಹಲಿ ಆಗಸ್ಟ್ 03: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಟಗರಿ ,3 ವಿಜ್ಞಾನ ಕೇಂದ್ರ, 8 ಮೀಟರ್ ಅಗಲದ ಟೈಪ್ ಬಿ ಡಿಜಿಟಲ್ ಡೋಮ್ ಪ್ಲಾನೇಟೋರಿಯಮ್. ರಾಯಚೂರು ಜಿಲ್ಲೆಯಲ್ಲಿ 22.25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಟಗರಿ – 2, ಟೈಪ್ ಬಿ ವಿಜ್ಞಾನ ಕೇಂದ್ರ ಸ್ಥಾಪನೆ, ಯಾದಗಿರಿ ಜಿಲ್ಲೆಯಲ್ಲಿ ಟೈಪ್ ಬಿ ಕೆಟಗರಿ – 3 ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳನ್ನ ಕೇಂದ್ರ ಸರಕಾರ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಶೀಘ್ರದಲ್ಲಿ ಒಪ್ಪಿಗೆ ನೀಡುವ ಭರವಸೆಯನ್ನ ಕೇಂದ್ರ ಸಚಿವರು ನೀಡಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್ ಬೋಸರಾಜು ತಿಳಿಸಿದರು.
ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವರಾದ ಜಿ ಕಿಶನ್ ರೆಡ್ಡಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಭಗವಂತ ಖುಬಾ ಹಾಗೂ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಟಗರಿ – 3 ವಿಜ್ಞಾನ ಕೇಂದ್ರ, 8 ಮೀಟರ್ ಅಗಲದ ಟೈಪ್ – ಬಿ ಡಿಜಿಟಲ್ ಡೋಮ್ ಪ್ಲಾನೇಟೋರಿಯಮ್ ನಿರ್ಮಾಣ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಹಾಗೂ ಡಿಜಿಟಲ್ ಡೋಮ್ ಪ್ಲಾನೆಟೋರಿಯಮ್ ನಿರ್ಮಾಣಕ್ಕಾಗಿ 9.36 ಏಕರೆ ಜಾಗವನ್ನು ಈಗಾಗಲೇ ಸಬ್-ರೀಜನಲ್ ಸೈನ್ಸ್ ಸೆಂಟರ್ ಸೊಸೈಟಿ ಗೆ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಕೇಂದ್ರ ಸರಕಾರಕ್ಕೆ ಡಿಪಿಆರ್ ನ್ನು ಸಲ್ಲಿಸಲಾಗಿದೆ. ಈ ಕೇಂದ್ರಗಳ ಸ್ಥಾಪನೆಯಿಂದ ನಗರದ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪತ್ರವಹಿಸಲಿದೆ. ಈ ಬಗ್ಗೆ ಅಗತ್ಯ ಅನುದಾನವನ್ನು ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು ಕೇಂದ್ರ ಸರಕಾರದ ಅನುಮತಿಯ ಅಗತ್ಯವಿದೆ. ಅನುಮತಿಯನ್ನು ಶೀಘ್ರದಲ್ಲಿ ನೀಡಬೇಕು ಎನ್ನುವ ಮನವಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳ ಸ್ಥಾಪನೆ:
ಹಿಂದುಳಿದ ಜಿಲ್ಲೆಗಳಾಗಿರುವ ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಲ್ಲಿಸಿರುವ ಪ್ರಸ್ತಾಪಗಳಿಗೆ ಶೀಘ್ರ ಒಪ್ಪಿಗೆ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಯಾದಗಿರಿ ಜಿಲ್ಲೆಯಲ್ಲಿ 22.25 ಕೋಟಿ ರೂಪಾಯಿಗಳ ಅನುದಾನದಲ್ಲಿ ಕೆಟಗರಿ-3, ಟೈಪ್-ಬಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಅಗತ್ಯವಿರುವ ಶೇಕಡಾ 50 ರಷ್ಟು ಅನುದಾನ ರಾಜ್ಯ ಸರಕಾರ ಭರಿಸುವ ಒಪ್ಪಿಗೆಯನ್ನು ನೀಡಿದೆ. ಕೇಂದ್ರ ಸ್ಥಾಪನೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಎತ್ತಿದ್ದಂತಹ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಿದೆ. ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ರಾಜ್ಯ ಸರಕಾರ ನೀಡಲು ಸಿದ್ದವಿದೆ. ಹಿಂದುಳಿದ ಜಿಲ್ಲೆಯಾಗಳಾಗಿರುವ ಯಾದಗಿರಿ ಮತ್ತು ರಾಯಚೂರಿನ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಆಸಕ್ತರ ಅನುಕೂಲಕ್ಕಾಗಿ ಇದು ಬಹಳ ಅಗತ್ಯವಾಗಿದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವ ಹಾಗೂ ಅಗತ್ಯ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.
ಏಮ್ಸ್ ಮಂಜೂರಾತಿಗೆ ಒತ್ತಡ ಹೇರುವಂತೆ ಕೇಂದ್ರ ಸಚಿವರಿಗೆ ಮನವಿ
ರಾಯಚೂರಿಗೆ ಬಹು ಅವಶ್ಯವಿರುವ ಏಮ್ಸ್ ಮಂಜೂರಾತಿ ಪ್ರಕ್ರಿಯೆಯನ್ನ ಚುರುಕುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಒತ್ತಡ ಹೇರುವಂತೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನ ಪ್ರತಿನಿಧಿಸುವ ಸಚಿವರಾದ ಭಗವಂತ ಖೂಬಾ ಅವರನ್ನ ಭೇಟಿಯಾಗಿ, ರಾಯಚೂರಿನಲ್ಲಿ ಏಮ್ಸ್ ನ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಮನ್ಸೂಖ್ ಮಂಡವಿಯಾ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಭಾಗದ ಜನರ ಚಿಕಿತ್ಸೆಗಾಗಿ ಎಮ್ಸ್ ಅವಶ್ಯಕತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮನವೊಲಿಸಬೇಕು ಎಂದು ಸಚಿವರು ಕೇಂದ್ರ ಸಚಿವ ರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ ನಾಯಕ್ ಉಪಸ್ಥಿತರಿದ್ದರು.