ಬೆಂಗಳೂರು: ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಹೈ ಕಮಾಂಡ್ ದೆಹಲಿಯಿಂದ ನಿಯಂತ್ರಿಸುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ನಡೆದ ಸಭೆಯ ಬಗ್ಗೆ ಅಭ್ಯಂತರ ಇಲ್ಲ. ಆದರೆ, ಇಡಿ ಸಂಪುಟ ದೆಹಲಿಗೆ ಹೋಗಿ ಪಕ್ಷದ ಸಭೆ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ನಡೆದಿರಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗಿದೆ ಎಂದು ದೂರಿದರು.
ಕನ್ನಡದ ಅಸ್ಮಿತೆಗೆ ಧಕ್ಕೆ:
ಸಿದ್ದರಾಮಯ್ಯ ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡುತ್ತಿದ್ದರು. ಈಗ ಇಡೀ ಸಂಪುಟವನ್ನೇ ದೆಹಲಿಗೆ ಕರೆದುಕೊಂಡು ಹೊಗಿ ಕನ್ನಡದ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ. ರಾಜ್ಯ ಸರ್ಕಾರದ ಆಡಳಿತವನ್ನು ಕಾಂಗ್ರೆಸ್ ಹೈ ಕಮಾಂಡ್ ನಿಯಂತ್ರಣ ಮಾಡುತ್ತಿದೆ. ಕರ್ನಾಟಕದ ಜನತೆಗೆ ಇವರು ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ವೀಕ್: ಮೊದಲನೇ ಅವಧಿಯ ಸಿಎಂ ಸಿದ್ದರಾಮಯ್ಯಗೂ ಎರಡನೇ ಅವಧಿಯ ಸಿಎಂ ಸಿದ್ದರಾಮಯ್ಯಗೂ ಸಾಕಷ್ಟು ವ್ಯತ್ಯಾಸ ಇದೆ. ಈಗಿನ ಸಿಎಂ ಸಿದ್ದರಾಮಯ್ಯ ಗೆ ಆಡಳಿತದ ಮೇಲಿನ ಹಿಡಿತ ತಪ್ಪಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸರ್ಕಾರದ ಆರಂಭದಲ್ಲಿಯೇ ಇಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಾಸಕಾಂಗ ಸಭೆಯಲ್ಲಿಯೂ ಶಾಸಕರು ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟಿಲ್ಲ. ಟಾನ್ಸಫರ್ ಮಾಡುವ ದಂಧೆ, ಸ್ವಜನ ಪಕ್ಷಪಾತ. ಅವ್ಯಾಹತವಾಗಿ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಸಂದರ್ಭದಲ್ಲಿ ಪ್ರವಾಹ, ಬರ ಇರುವ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ವೈಫಲ್ಯತೆ ಕಾಣಿಸುತ್ತಿದೆ.
ಎರಡೇ ತಿಂಗಳಲ್ಲಿ ಮುಖ್ಯಮಂತ್ರಿ ಗಳು ಸಂಪುಟದ ಸಚಿವರನ್ನು ಕರೆದುಕೊಂಡು ದೆಹಲಿಗೆ ಹೋಗಿ ಸಭೆ ನಡೆಸಿರುವುದು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಗೊತ್ತಾಗಿದೆ. ಸಿದ್ದರಾಮಯ್ಯ ಒನ್ ಗೂ, ಸಿದ್ದರಾಮಯ್ಯ ೨ ಬಹಳಷ್ಟು ವ್ಯತ್ಯಾಸವಾಗಿದೆ. ರಾಜಕೀಯ ಸ್ಥಿತಿಗತಿ ಆಗಿನಿಂದ ಈಗ ಬದಲಾಗಿದೆ. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿದೆ. ಅವರು ಚೆನ್ನಾಗಿರಲಿ, ಆದರೆ, ಅವರು ಅಡಳಿತ ನಡೆಸುವಲ್ಲಿ ಮೊದಲಿನಷ್ಟು ಸ್ಟ್ರಾಂಗ್ ಇಲ್ಲ ಎಂದು ಅಭಿಪ್ರಾಯ ಪಟ್ಟರು.
ಬಿಜೆಪಿ ಅವಧಿಯ ಅಕ್ರಮಗಳ ಬಗ್ಗೆ ಮಾತನಾಡುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗುರುವ ಅವ್ಯವಹಾಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಈ ಬಗ್ಗೆ ಉತ್ತರ ನೀಡಲಿ. ನಮ್ಮ ಅವಧಿಯಲ್ಲಿ ಅಭಿವೃದ್ಧಿಗೆ ಬಿಡುಗಡೆಯಾದ ಹಣ ತಡೆ ಹಿಡಿದಿದ್ದಾರೆ. ಇದರಿಂದ ಯಾವುದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದರು.
ದಲಿತ ವಿರೋಧಿ ನೀತಿ:
ಎಸ್ಸಿಪಿ ಟಿಎಸ್ ಪಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದು ಸರ್ಕಾರದ ದಲಿತ ವಿರೋಧಿ ನೀತಿ ತೊರಿಸುತ್ತದೆ. ಎಸ್ಸಿಪಿ ಟಿಎಸ್ ಪಿ ಯೋಜನೆಗೆ ಮೀಸಲಿಟ್ಟ 34 ಸಾವಿರ ಕೋಟಿ ರೂ. ಅನುದಾನದಲ್ಲಿ ಸುಮಾರು 13 ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದಲಿತರ ಅಭಿವೃದ್ಧಿ ಹೊಡೆತ ಬೀಳಲಿದೆ. ಇದು ಕಾಂಗ್ರೆಸ್ ನ ದಲಿತ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದರು.
ಇನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ರಾಯರೆಡ್ಡಿಯವರು ಅತ್ಯಂತ ಮೇಧಾವಿಗಳು ಅವರು ಯಾವಾಗ ಯಾರ ಬಗ್ಗೆ ಏನು ಮಾತನಾಡುತ್ತಾರೆ ಎನ್ನುವುದು ತಿಳಿಯುವುದಿಲ್ಲ ಎಂದು ಹೇಳಿದರು.