ಸುದ್ದಿಮೂಲ ವಾರ್ತೆ
ಯಾದಗಿರಿ. ಆ . 3 – ಜಿಲ್ಲೆಯಲ್ಲಿ ಸದ್ಯ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಕೂಡ ಅಧಿಕಾರಿಗಳು ನಿಶ್ಚಿಂತೆಯಿಂದ ಇರದೆ ಅವಶ್ಯಕ ಮುನ್ನೆಚ್ಚರಿಕೆಯೊಂದಿಗೆ ಇರುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ವಕ್ಫ್ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈ ಹಿಂದೆ ಪ್ರವಾಹಕ್ಕೆ ತುತ್ತಾದ ಗ್ರಾಮ ಗಳ ಸಮಗ್ರ ಮಾಹಿತಿಯನ್ನು ಇಟ್ಟುಕೊಳ್ಳಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಆರೋಗ್ಯ ಸಂಬಂಧಿತ ಸೇವೆಗಳು, ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಸುರಕ್ಷತೆಗೆ ನೀಡಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅವಶ್ಯಕ ಸಿದ್ಧತೆಯಲ್ಲಿ ಇರುವಂತೆ ಅವರು ಸೂಚನೆ ನೀಡಿದರು.
ಮಹಾರಾಷ್ಟ್ರದಲ್ಲಿ ಆಗುವ ಹೆಚ್ಚಿನ ಮಳೆ ಆಧಾರದ ಮೇಲೆ ಆಲಮಟ್ಟಿ, ನಾರಾಯಣಪುರ ಸೇರಿದಂತೆ ವಿವಿಧ ಜಲಾಶಯಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣದ ಬಗ್ಗೆ ಸೂಕ್ತ ನಿಗಾ ಇಡಬೇಕು. ಭೀಮಾ ಮತ್ತು ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೋಡಲ್ ಅಧಿಕಾರಿಗಳು ಸೂಕ್ತ ಜಾಗೃತಿಯನ್ನು ವಹಿಸಿಕೊಳ್ಳಬೇಕು. ಆಯಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಂಬಂಧಿಸಿದ ಗ್ರಾಮಸ್ಥರೊಂದಿಗೆ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ವಿಶೇಷವಾಗಿ ನೀಲಕಂಠರಾಯನ ಗಡ್ಡಿ ಕುರಿತು ಹಾಗೂ ಮುಂದೆ ಪ್ರವಾಹ ಬಂದಲ್ಲಿ ಸ್ಥಾಪಿಸಬಹುದಾದ ಕಾಳಜಿ ಕೇಂದ್ರಗಳ ಬಗ್ಗೆ ಸಿದ್ದತೆಯಲ್ಲಿ ಇರಬೇಕು. ಜಿಲ್ಲಾಡಳಿತ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಒಂದುವೇಳೆ ಪ್ರವಾಹ ಬರುವಂತಹ ಪರಿಸ್ಥಿತಿ ಬಂದಲ್ಲಿ ಪ್ರಥಮ ಆರು ಗಂಟೆಯೊಳಗೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲು ಯುದ್ದೋಪಾದಿಯಲ್ಲಿ ಸನ್ನದ್ದರಾಗಬೇಕು. ಅವಶ್ಯಕ ಬೋಟುಗಳು ,ಸಾಧನ ಸಲಕರಣೆಗಳು , ಸಿಬ್ಬಂದಿಗಳು, ಔಷಧಿಗಳೊಂದಿಗೆ ಸಿದ್ದತೆಯಲ್ಲಿ ಇರುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕರ ಕೊರತೆ ನಿಭಾಯಿಸಲು ಅನುಕೂಲವಾಗುವಂತೆ ನೂತನ ಅತಿಥಿ ಶಿಕ್ಷಕರ ನೇಮಕಾತಿ ಆಗುವವರೆಗೆ ನಿಯಮಾವಳಿಗಳಂತೆ ಈಗಿರುವ ಶಿಕ್ಷಕರನ್ನು ಬಳಸಿಕೊಳ್ಳಲು ಪ್ರಯತ್ನಿಸಬೇಕು. ಅದರಂತೆ ಪ್ರತಿ 10 ಶಾಲೆಗಳಿಗೆ ಓರ್ವ ನೋಡಲ್ ಅಧಿಕಾರಿ ನೇಮಕ ಮಾಡಿಕೊಂಡು ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ದೊರಕಿಸಲು ಸಲಹೆ ನೀಡಿದ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಈ ದಿಶೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅದರಂತೆ ಮಕ್ಕಳ ಹಾಜರಾತಿ ನಿರ್ವಹಣೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ವಿಶೇಷ ಗಮನ ನೀಡುವಂತೆ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಮಾತನಾಡಿ ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿ ದಡದಲ್ಲಿ ಸುರಪುರ ತಾಲೂಕಿನ 15, ಹುಣಸಗಿ ತಾಲೂಕಿನ 07, ವಡಿಗೇರಾ ತಾಲೂಕಿನ 19, ಶಹಾಪುರ ತಾಲೂಕಿನ 04 ಗ್ರಾಮಗಳು ಸೇರಿ ಒಟ್ಟು 45 ಗ್ರಾಮಗಳು ಬರುತ್ತವೆ. ಇದರಲ್ಲಿ ಸುರಪುರ 03, ಹುಣಸಗಿ0 4, ವಡಿಗೇರಾ 07, ಶಹಾಪುರ 02 ಒಟ್ಟು 16 ಕಾಳಜಿ ಕೇಂದ್ರಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಸುರಪುರ ತಾಲೂಕಿನ ತಿಂಥಣಿ, ಬಂಡೊಳ್ಳಿ, ಲಿಂಗದಳ್ಳಿ ಎಸ್.ಕೆ, ನಾಗರಾಳ, ಕರ್ನಾಳ, ಶೆಳ್ಳಗಿ, ಹಾವಿನಾಳ, ದೇವಾಪುರ, ಮುಷ್ಠಳಿ, ಆಲ್ದಾಳ, ಚೌಡೇಶ್ವರಹಾರ, ಅಡ್ಡೊಡಗಿ, ಹೆಮನೂರು, ಸೂಗೂರು,ಅರಳಹಳ್ಳಿ ಗ್ರಾಮಗಳು.,ಹುಣಸಗಿ ತಾಲೂಕಿನ ನಾರಾಯಣಪುರ, ಜಂಗಿನಗಡ್ಡಿ, ಮೇಲಿನಗಡ್ಡಿ, ಅಮಾಪುರ( ಎಸ್.ಕೆ), ಗೆದ್ದಲಮರಿ, ಜುಮಾಪುರ, ಬೆಂಜಿನಗಡ್ಡಿ ಗ್ರಾಮಗಳು. ಶಹಾಪುರ ತಾಲೂಕಿನ ಕೊಳ್ಳುರು ಎಮ್, ಗೌಡೂರು, ಮರಕಲ್, ಟೊಣ್ಣೂರು ಗ್ರಾಮಗಳು,ವಡಿಗೇರಾ ತಾಲೂಕಿನ ಯಕ್ಷಂತಿ, ಅನಕಸೂಗುರು, ಚನ್ನೂರು, ಗೊಂದೆನೂರು, ಕೊಂಕಲ್, ತುಮಕೂರು, ಇಟಗಾ ಎಸ್ ಡಬ್ಲೂ, ಹಬಿಶಿಹಾಳ, ರೊಟ್ನಡಗಿ, ಕದರಾಪುರ, ಬೆಂಡೆಬೆಂಬಳಿ, ಕೋಡಾಲ,ಗೋನಾಲ, ಶಿವಪುರ, ಅಗ್ನಿಹಾಳ, ಗುಂಡ್ಲೂರು, ಸಂಗಂ( ಡಿ), ಮದರಕಲ್, ಐಕೂರು ಗ್ರಾಮಗಳು ಕೃಷ್ಣಾ ನದಿ ದಡದಲ್ಲಿ ಬರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ಭೀಮಾನದಿ ದಡದಲ್ಲಿ ಯಾದಗಿರಿ ತಾಲೂಕಿನ 17 ಗ್ರಾಮಗಳು, ಶಹಾಪುರ ತಾಲೂಕಿನ 04 ಗ್ರಾಮಗಳು, ವಡಿಗೇರಾ ತಾಲೂಕಿನ 19 ಗ್ರಾಮಗಳು ಒಟ್ಟು 40 ಗ್ರಾಮಗಳು ಬರುತ್ತವೆ. ಇದರಲ್ಲಿ ಯಾದಗಿರಿ 05, ಶಹಾಪುರ 03, ವಡಿಗೇರಾ 07 ಒಟ್ಟು 15 ಕಾಳಜಿ ಕೇಂದ್ರಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾದಗಿರಿ ತಾಲೂಕಿನ ಯಾದಗಿರಿ ಬಿ ಮತ್ತು ಕೆ, ತಳಕ, ಹೆಡಗಿಮದ್ರಾ, ಠಾಣಗುಂದಿ, ಅಬ್ಬೆತುಮಕೂರ, ಮುಷ್ಠೂರು, ಎಮ್ ಹೊಸಳ್ಳಿ, ಸಾವೂರ, ಮಲ್ಹಾರ್, ಲಿಂಗೇರಿ, ಕೌಳೂರು, ಆನೂರ್ (ಕೆ), ಆನೂರ್ (ಬಿ), ಗೂಡೂರು, ಭೀಮನಳ್ಳಿ, ಗೊಂದಡಗಿ ಗ್ರಾಮಗಳು ಬರುತ್ತವೆ.ವಡಿಗೇರಾ ತಾಲೂಕಿನ ಮಾಚನೂರ, ಶಿವನೂರು, ಬೂದಿನಾಳ, ಬೆನಕನಹಳ್ಳಿ ಕೆ, ನಾಯ್ಕಲ್, ಅರ್ಜುಣಗಿ, ಕಂದಳ್ಳಿ, ಬಿಳ್ಹಾರ, ಗುರುಸರಂ, ಬಬಲಾದ, ಹಾಲಗೇರಾ, ಗಡ್ಡೆಸೂಗೂರು, ಹುಲಕಲ್ ಜೆ, ಸುಗೂರು, ಕೊಂಗಂಡಿ, ಜೋಳದಡಗಿ, ಗೋಡಿಹಾಳ, ಬೀರನಾಳ, ಕುಮನೂರ ಗ್ರಾಮಗಳು ಬರುತ್ತವೆ.,ಶಹಾಪುರ ತಾಲೂಕಿನ ಶಿರವಾಳ, ರೋಜಾ, ಅಣಬಿ, ಹುರಸಗುಂಡಗಿ ಗ್ರಾಮಗಳು ಭೀಮಾ ನದಿ ದಡದಲ್ಲಿ ಬರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಲ್ಲಾ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ 24*7 ಕಂಟ್ರೋಲ್ ರೂಮ್ ಸಹಾಯವಾಣಿ ತೆರೆಯಲಾಗಿದೆ. ಯಾದಗಿರಿ ಅಗ್ನಿಶಾಮಕ ಠಾಣೆಯಲ್ಲಿ 03, ಶಹಾಪುರ ಅಗ್ನಿಶಾಮಕ ಠಾಣೆಯಲ್ಲಿ 01, ಸುರಪುರ ಅಗ್ನಿಶಾಮಕ ಠಾಣೆಯಲ್ಲಿ 02 ಬೋಟುಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.