ಸುದ್ದಿಮೂಲ ವಾರ್ತೆ
ಬಳ್ಳಾರಿ, ಜು.5:ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಹೆರಕಲ್ಲು ಗ್ರಾಮದ ಶ್ರೀ ಬಳಗಾನೂರು ಮರಿಶಿವಯೋಗಿಗಳ ಮಠದ ಪರಮ ಪೂಜ್ಯ ಶ್ರೀಚಿದಾನಂದಯ್ಯ ತಾತನವರು ದಿನಾಂಕ 4:8:23 ರಂದು ಸಂಜೆ ಲಿಂಗೈಕರಾಗಿದ್ದಾರೆ.
ಶ್ರೀಗಳು ದೇವಿಯ ಅರಾಧಕರಾಗಿದ್ದು, ವಾಕ್ಸಿದ್ದಿ ಪುರುಷರು, ಮೌನತಪಸ್ವಿ ಗಳಾಗಿದ್ದರು. ಹೆರಕಲ್ಲು, ಕೆಂಚನಗುಡ್ಡ, ಕೆಂಚನಗುಡ್ಡ ತಾಂಡ, ನಿಟ್ಟೂರು, ಉಡೆಗೋಳ, ಕರ್ಚಿಗನೂರು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ, ನಡುವಿ ಎಂ. ಸೂಗೂರು ಸಿರಿಗೇರಿ, ನಾಡಂಗ, ಸಿಂಧನೂರು, ಕಾರಟಗಿಬಳಗಾನೂರು, ಕರೂರು, ಚಾಣಕನೂರು, ಬಳ್ಳಾರಿ, ಹೊಸಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತ ಸಮೂಹ ಹೊಂದಿದ್ದರು.
ಪರಮಪೂಜ್ಯರು ಪ್ರತಿ ವರ್ಷ ಪುರಾಣ ಪ್ರವಚನ ಕಾರ್ಯಕ್ರಮ, ಮಠಕ್ಕೆ ಬರುವ ಭಕ್ತಾದಿಗಳ ತಮ್ಮ ಕಷ್ಟ ಕಾರ್ಪಣ್ಯಗಳನ್ನ ತಮ್ಮ ವಾಕ್ಸಿದ್ದಿ ಮೂಲಕ ಪರಿಹರಿಸುತ್ತಾ ಅವರ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ ಪರಿಹರಿಸುತ್ತಿದ್ದರು. ಹೆಚ್ಚು ಮಾತನಾಡದೆ ಸದಾ ಮೌನವಾಗಿರುತ್ತ ತಮ್ಮ ದೈವೀಶಕ್ತಿಯ ಮೂಲಕ ಸುತ್ತಮುತ್ತಲಿನ ಗ್ರಾಮದ ಜನರ ಭಾವನೆಗಳಿಗೆ ಸ್ಪಂದಿಸುತ್ತ ಆಧ್ಯಾತ್ಮಿಕವಾಗಿ ಹೆರಕಲ್ಲು ಗ್ರಾಮವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿದ್ದರು. ಚಿಕ್ಕ ಮಕ್ಕಳಲ್ಲಿ ಕಂಡುಬರುವ ಬಾಲಭಾದೆಗಳನ್ನು ಪರಿಹರಿಸುತ್ತಾ, ಜನರು ಪ್ರತಿಯೊಂದು ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಪೂಜ್ಯರ ಆಶೀರ್ವಾದ ಪಡೆದುಕೊಂಡು ಪ್ರಾರಂಭಿಸುತ್ತಿದ್ದರು.
ಹೊಸ ಮನೆ ಪ್ರವೇಶ, ಹೊಲಗದ್ದೆಗಳ ಖರೀದಿ ಸಂದರ್ಭ, ಹೊಸ ವಾಹನ ಖರೀದಿ ಸಂದರ್ಭದಲ್ಲಿ ಪರಮಪೂಜ್ಯರ ವಾಕ್ಯದಂತೆ ಈ ಭಾಗದ ಜನರು ನಡೆದು ಕೊಳ್ಳುತ್ತಿದ್ದರು.
ಪೂಜ್ಯರ ಆಶೀರ್ವಾದದ ನಂತರ ತಮ್ಮೆಲ್ಲ ಶುಭಕಾರ್ಯ ಪ್ರಾರಂಭಿಸಿ ಮುಂದುವರಿಸುತ್ತಿದ್ದರು.
ಈ ದಿನ ಈ ಭಾಗದ ಸಾವಿರಾರು ಭಕ್ತರು ಪರಮಪೂಜ್ಯರನ್ನ ಕಳೆದುಕೊಂಡು ದುಃಖ ತಪ್ತವಾಗಿ ಅವರ ಆಶೀರ್ವಾದವನ್ನು ಸದಾ ಬಯಸುತ್ತಿದ್ದಾರೆ. ಈ ಆಧುನಿಕ ಕಾಲದಲ್ಲಿ ಪವಾಡ ಪುರುಷರಾಗಿ, ಆಧ್ಯಾತ್ಮಿಕ ಸಾಧಕರಾಗಿ ವಾಕ್ಸಿದ್ದಿ ಪುರುಷರಾಗಿ ಜನಮಾನಸದಲ್ಲಿ ಉಳಿದಿರುವ ಪೂಜ್ಯರು ಶರಣರಂತೆ, ಅವದೂತರಂತೆ ಬದುಕಿದ ಸಾಧಕರಾಗಿ, ತ್ರಿಕಾಲ ಪೂಜೆಯನ್ನು ಶ್ರೀಮಠದಲ್ಲಿ ನೆರವೇರಿಸುತ್ತಾ ಸಾಮಾಜಿಕವಾಗಿ ಆಧ್ಯಾತ್ಮಿಕವಾಗಿ ಸದಾ ಭಕ್ತರ ಶ್ರೇಯಸ್ಸನ್ನು ಬಯಸುತ್ತಿದ್ದ ಪೂಜ್ಯರು ಲಿಂಗೈಕ್ಯರಾಗಿದ್ದಾರೆ.
ಶ್ರೀ ಷ. ಬ್ರ. ಚಂದ್ರಮೌಳಿ ಶಿವಾಚಾರ್ಯ ಸ್ವಾಮಿಗಳು ಕಂಬಾಳಿ ಮಠ ತೆಕ್ಕಲಕೋಟೆ ಇವರ ದಿವ್ಯ ಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಶನಿವಾರ ಸಂಜೆ ವೀರಶೈವ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ಹೆರಕಲ್ಲು ಗ್ರಾಮದ ಬಳಗನೂರು ಮರಿಶಿವಯೋಗಿ ಮಠದ ಆವರಣದಲ್ಲಿ ನೆರವೇರಿಸಲಾಗುತ್ತದೆಂದು ಮಠದ ಭಕ್ತವೃಂದದವರು ತಿಳಿಸಿದ್ದಾರೆ.