ಮುಂಬೈ, ಆ.6: ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರದ ವತಿಯಿಂದ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿರುವ ವಸತಿ ಸಂಕೀರ್ಣವನ್ನು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವೀಕ್ಷಿಸಿದರು.
ಮುಂಬೈ ಅಂಧೇರಿ ಈಸ್ಟ್ ನಲ್ಲಿರುವ ಸಾಯಿಬಾಬಾ ನಗರದ ಟೀಚರ್ಸ್ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ವಸತಿ ಸಂಕೀರ್ಣ ವೀಕ್ಷಿಸಿ ಮಾಹಿತಿ ಪಡೆದರು.
ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರದ ವತಿಯಿಂದ ಕೊಳೆಗೇರಿ ಪ್ರದೇಶ ವಾಸಿಗಳ ಸಹಕಾರ ಸಂಘ ಸ್ಥಾಪಿಸಿ ಗುತ್ತಿಗೆದಾರರ ಜತೆ ಒಪ್ಪಂದ ಮಾಡಿಕೊಂಡು ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ.
ಒಟ್ಟಾರೆ ಪ್ರದೇಶದ ಶೇ. 50 ರಷ್ಟು ಜಾಗ ಗುತ್ತಿಗೆ ಸಂಸ್ಥೆಗೆ ನೀಡಲಾಗುತ್ತದೆ. ಒಂದೊಮ್ಮೆ ಯೋಜನೆಯಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲದ ವ್ಯವಸ್ಥೆ ಬೇಕಾದರೂ ಗುತ್ತಿಗೆ ಸಂಸ್ಥೆಯೇ ಬ್ಯಾಂಕ್ ಮುಖ್ಯಸ್ಥರ ಜತೆ ಸಂಪರ್ಕ ಸಾಧಿಸಿ ವ್ಯವಸ್ಥೆ ಮಾಡಿಸುತ್ತದೆ.
ಅಷ್ಟೇ ಅಲ್ಲದೆ ಕೊಳೆಗೇರಿ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಾಣ ಮಾಡುವವರೆಗೆ ಅಲ್ಲಿನ ನಿವಾಸಿಗ ಬೇರೆಡೆಗೆ ಶಿಫ್ಟ್ ಮಾಡುವುದು ಅಥವಾ ಬೇರೆ ಕಡೆ ವಾಸಿಸಲು ಮನೆ ಬಾಡಿಗೆ ಸಹ ಪಾವತಿಸುತ್ತದೆ.
ಇದೇ ಮಾದರಿ ಕರ್ನಾಟಕದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಗಳಲ್ಲಿ ಜಾರಿ ಮಾಡಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆಯೂ, ಸಾಧಕ ಬಾಧಕ ಕುರಿತು ಪರಿಶೀಲನೆ ಮಾಡುವಂತೆ ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಮುಂಬೈ ಕೊಳೆಗೇರಿ ಪುನರ್ ವಸತಿ ಪ್ರಾಧಿಕಾರದ ಅಧಿಕಾರಿಗಳನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆ ಸಚಿವರು ಆಹ್ವಾನ ನೀಡಿದರು.
ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಮಾಜಿ ಸಂಸದ ಹರ್ಬನ್ ಸಿಂಗ್, ಪ್ರಾಧಿಕಾರದ ಅಧಿಕಾರಿಗಳಾದ ಆಶೀಶ್ ಚೌದರಿ , ಬಾಲಾಜಿ ಮುಂಡೆ, ಅಭಯ್ ರಾಮ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ನವಿ ಮುಂಬೈ ನ ತಲೋಜ ಪ್ರದೇಶದಲ್ಲಿ ಶಿರ್ಕೆ ಸಂಸ್ಥೆ ಯ ಸಿಮೆಂಟ್ ಪ್ರೀಕಾಸ್ಟ್ ಸೆಂಟರ್ ಹಾಗೂ ವಸತಿ ಸಂಕೀರ್ಣ ವೀಕ್ಷಿಸಿದರು.