ಸುದ್ದಿಮೂಲವಾರ್ತೆ
ಕೊಪ್ಪಳ,ಆ.7: ಪ್ರತಿ ಗ್ರಾಮ ಪಂಚಾಯತಿಯಲ್ಲಿ ಶೀಘ್ರದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಮಕ್ಕಳ ಆರೈಕೆದಾರರ ತರಬೇತಿಯನ್ನು ಪಡೆದು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದರು.
ಇಂದು ಕೊಪ್ಪಳ ತಾಲೂಕ ಪಂಚಾಯತ ಸಭಾಂಗಣದಲ್ಲಿ ಗ್ರಾಮೀಣ ಶಿಶುಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರಿಗೆ ಏರ್ಪಡಿಸಿದ್ದ 04 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಅಗಸ್ಟ್-15 ರಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ಪ್ರತಿ ಗ್ರಾಮ ಪಂಚಾಯತಿಗೆ ಒಂದದಂತೆ ಶಿಶುಪಾಲನಾ ಕೇಂದ್ರ ತೆರೆಯಲಿದ್ದು ಅಲ್ಲಿ ದಾಖಲಾಗುವ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಆರೈಕೆದಾರರ ಅಗತ್ಯವಿದೆ. ಮಕ್ಕಳ ಆರೈಕೆದಾರರಿಗೆ ಅವರ ಜಾಬಕಾರ್ಡ ಮೂಲಕ ಅವರಿಗೆ ಗೌರವಧನ ಪಾವತಿಸಲಾಗುತ್ತದೆ. ಒಟ್ಟು 04 ದಿನಗಳ ಅವಧಿಗೆ ತರಬೇತಿ ಇರುವದರಿಂದ ಮಾಸ್ಟರ್ ಟ್ರೈನರ್ ಗಳು ತರಬೇತಿ ನೀಡಲಿದ್ದು ಅಗತ್ಯವಾದ ಮಾಹಿತಿ ಪಡೆದು ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು.
ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ ಮಾತನಾಡಿ ಮಕ್ಕಳು ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗುತ್ತಿರುವದರಿಂದ ಇದು ಸೂಕ್ಷ್ಮ ವಿಷಯವಾಗಿದ್ದು ಎಲ್ಲರೂ ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು. ಈ ಕುರಿತು ಆರೈಕೆದಾರರು ವೈಯಕ್ತಿಕ ಗಮನಹರಿಸಿ ಮಕ್ಕಳನ್ನು ಆರೈಕೆ ಮಾಡತಕ್ಕದ್ದು. ಇದರಲ್ಲಿ ಯಾವುದೇ ಕಾರಣಕ್ಕೂ ಕರ್ತವ್ಯ ನಿರ್ಲಕ್ಷ್ಯವಹಿಸುವಂತಿಲ್ಲವೆಂದು ಕರೆ ನೀಡಿದರು. ಕಾರ್ಯಕ್ರಮವನ್ನು ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ನಿರ್ವಹಿಸಿದರು.
ತಾಲೂಕ ಪಂಚಾಯತಿ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತರಬೇತಿಯ ಮಾಸ್ಟರ್ ಟ್ರೈನರ್ ಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜಯಶ್ರೀ, ಮೇಲ್ವಿಚಾರಕಿ ಭುವನೇಶ್ವರಿ, ತಾಲೂಕ ಪಂಚಾಯತಿ ಸಿಬ್ಬಂದಿ ಗಂಗಾಧರ, 37 ಗ್ರಾಮ ಪಂಚಾಯತಿಗಳ ಆರೈಕೆದಾರರು ಹಾಜರಿದ್ದರು.