ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 7 : ತಾಲೂಕಿನಾದ್ಯಂತ ಸೀಬೆಕಾಯಿ ಬೆಳೆದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಉತ್ತಮ ಫಸಲು ಗಳಿಸಿರುವ ಸೀಬೆಕಾಯಿ ಗಿಡಗಳಿಗೆ ರೋಗಗಳು ಕಂಡುಬಂದಿದ್ದು, ಲಕ್ಷಾಂತರ ಖರ್ಚು ಮಾಡಿ ಬೆಳೆದಿದ್ದ ಸೀಬೆಕಾಯಿ ಬೆಳೆಗೆ ಕೊಳೆ ರೋಗ ಬಂದು ಬೆಳೆಗಳು ನಾಶವಾಗುತ್ತಿವೆ.
ತಾವರೆಕೆರೆ ಗ್ರಾಮ ಪಂಚಾಯಿತಿಯ ಕಾಳಪ್ಪನಹಳ್ಳಿ ಗ್ರಾಮದಲ್ಲಿ ಮಾರ್ಕೊಂಡಪ್ಪ ಎಂಬ ರೈತ ಒಂದು ಎಕರೆಗೆ ಸೀಬೆಕಾಯಿ ತೋಟ ನಿರ್ಮಾಣ ಮಾಡಲು 3 ಲಕ್ಷದವರೆಗೆ ಖರ್ಚು ಮಾಡಿರುವ ರೈತನಿಗೆ, ಹಣ್ಣಿಗೆ ಕೊಳೆರೋಗ ಬಂದು ಗಿಡದಲ್ಲಿನ ಸೀಬೆಕಾಯಿ ಭೂಮಿಗೆ ಉದುರಿ ಬೆಳೆಯನ್ನು
ಹಾಳು ಮಾಡುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವನ್ನಅನುಭವಿಸುತ್ತಿದ್ದಾರೆ.
ಹೊಸಕೋಟೆ ತಾಲೂಕಿನ ಸುಮಾರು 50 ಹೆಕ್ಟೇರ್ ಪ್ರದೇಶಗಳಲ್ಲಿ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ವಿವಿಧ ತಳಿಗಳ ಸೀಬೆಕಾಯಿ ಬೆಳೆಯನ್ನು ಬೆಳೆಯುತ್ತಿದ್ದು, 1 ಕೆ.ಜಿಗೆ 80 ರಿಂದ 100 ರೂಪಾಯಿ ಮಾರಟವಾಗುತಿತ್ತು. ಆದರೆ, ಸೀಬೆ ಹಣ್ಣು ನೆಲಕ್ಕೆ ಉದುರಿ ರೈತ ನಷ್ಟ ಅನುಭವಿಸುತ್ತಿದ್ದಾನೆ.
ಸೀಬೆಕಾಯಿ ಬೆಳೆಗಾರನಿಗೆ ಔಷಧಿ, ಕೊಟ್ಟಿಗೆ ಗೊಬ್ಬರ, ಕೂಲಿ, ನಿರ್ವಹಣಾ ವೆಚ್ಚ ಸೇರಿ ಪ್ರತಿ 1 ಎಕರೆಗೆ ಸುಮಾರು 3 ಲಕ್ಷ ರೂ. ವೆಚ್ಚವಾಗುತ್ತದೆ. ಉತ್ತಮ ಬೆಳೆಯಾದರೆ 3 ರಿಂದ 4 ಟನ್ ಫಸಲನ್ನು ನಿರೀಕ್ಷಿಸಬಹುದು. ಸೀಬೆಕಾಯಿ ದುಂಡಾಣು, ಅಂಗಮಾರಿ ರೋಗ ಕಂಡುಬರುತ್ತಿದ್ದು ಬೆಳೆಯ ಕಾಂಡಡ ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲೂ ಅಂಗಮಾರಿ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅಗತ್ಯ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ರೈತರಿಗೆ ನೀರಿಕ್ಷಿತ ಮಟ್ಟದ ಇಳುವರಿ ಸಾಧ್ಯವಿಲ್ಲದಂತಾಗಿದೆ.
ಸಾಲ ಮಾಡಿ ಗಿಡ ಬೆಳಸಿ ಔಷಧಿ ಹಾಗೂ ಗೊಬ್ಬರ ಹಾಕಿ ಬೆಳೆದ ಸೀಬೆಕಾಯಿಗಳಿಗೆ ಕೊಳೆ ರೋಗ ತಗುಲಿ ಹುಳುಗಳು ಬಿದ್ದು, ಕಾಯಿಗಳು ಭೂಮಿಗೆ ಉದುರಿ ನಷ್ಟವಾಗುತ್ತಿದೆ. ಇದರ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು. ಇಲ್ಲವಾದರೆ ನಮ್ಮ ಕುಟುಂಬ ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಬೇಕು ಎನ್ನುತ್ತಾರೆ ರೈತ ಮಾರ್ಕೊಂಡಪ್ಪ ಕಾಳಪ್ಪನಹಳ್ಳಿ.
ತಾಲ್ಲೂಕಿನಲ್ಲಿ ಸೀಬೆಕಾಯಿಯನ್ನು ಬೆಳೆಯುವವರು ಕಡಿಮೆ ಬೆಳೆಗಾರರು ಇರುವುದರಿಂದ ಸೀಬೆಕಾಯಿ ಬೆಳೆಗೆ ವಿಮೆ ಸೌಲಭ್ಯ ಇರುವುದಿಲ್ಲ. ನಮ್ಮಇಲಾಖೆಯಿಂದ ಹನಿ ನೀರವಾರಿಗೆ
ಅರ್ಜಿ ಸಲ್ಲಿಸಿದ್ದರೆ ಮಾತ್ರ ಸಹಯಧನ ನೀಡಲಾಗುವುದು. ಪ್ರಕೃತಿ ವಿಕೋಪಕ್ಕೆ ಹಾನಿಯಾಗಿದ್ದರೆ ವರದಿ ಪಡೆದು, ತಹಸಿಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ರಾಷ್ಟ್ರೀಯ ವಿಕೋಪ ನಿರ್ವಹಣೆ ಯೋಜನೆ ಅಡಿಯಲ್ಲಿ ಸಿಗುವಂತಹ ಸೌಲಭ್ಯವನ್ನು ಕೊಡಿಸಲಾವುದು ಎಂದು ಸಹಾಯಕತೋಟಗಾರಿಕೆ ನಿರ್ದೇಶಕಿ ರೇಖಾ ಭರವಸೆ ನೀಡಿದರು.