ಸುದ್ದಿಮೂಲ ವಾರ್ತೆ
ತುಮಕೂರು,ಆ.7:ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ವಿನೂತ .ಪಿ ಅವರು ಪತ್ರಿಕೋದ್ಯಮ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಸ್ವರ್ಣ ಪದಕ ಪಡೆದಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ ಹಾಲಪ್ಪ ಫೌಂಡೆಷನ್ ವತಿಯಿಂದ ಕೊಡ ಮಾಡುವ ಸ್ವರ್ಣ ಪದಕವನ್ನು ಪತ್ರಿಕೋದ್ಯಮ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದಿರುವ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಲಭಿಸಿರುವುದು ಸಂತಸ ತಂದಿದೆ.
ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿಯ ಕುಂದೂರು ಪಾಳ್ಯದ ನಿವಾಸಿಯಾಗಿರುವ ವಿನೂತ ಬಾಣಸಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತುರುವೇಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ, ಬಾಣಸಂದ್ರದ ವಿಎಸ್ಎಸ್ ಪ.ಪೂ. ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಬಿಎ ಪತ್ರಿಕೋದ್ಯಮ ಪದವಿಯನ್ನು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ತುಮಕೂರು ವಿಶ್ವವಿದ್ಯಾನಿಲಯದಿಂದ ಸ್ವರ್ಣ ಪದಕ ಪಡೆದು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾರೆ.
ಪೋಷಕರನ್ನು ಕಳೆದುಕೊಂಡಿರುವ ವಿನುತಾ ಹಾಗೂ ಸಹೋದರಿಗೆ ಅವರ ತಂದೆ ಬೆಳೆಸಿದ 20 ತೆಂಗಿನ ಮರಗಳಿಂದ ಬರುವ ಆದಾಯದಿಂದಲೇ ಜೀವನ ಮತ್ತು ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆ.
ವಿನೂತ ಅವರು ಮುಂದೆ ಐಎಎಸ್ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದು, ಉನ್ನತ ಹುದ್ದೆಗೆ ಹೋಗುವ ಗುರಿಯನ್ನು ಹೊಂದಿದ್ದಾರೆ.