ಸುದ್ದಿಮೂಲ ವಾರ್ತೆ
ತುಮಕೂರು ಆ.10 : ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ “ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣನ್ನು ಸಂಗ್ರಹಿಸಿ, ಆ. 20 ರೊಳಗೆ ಜಿಲ್ಲೆಗೆ ಕಳಿಸುವ ವ್ಯವಸ್ಥೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು ಮಾಡಬೇಕೆಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ. ಪ್ರಭು ಹೇಳಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಶಿಲಾಫಲಕಗಳನ್ನು ಸ್ಥಾಪಿಸಲು ಇಲಾಖೆ ವತಿಯಿಂದ ಪ್ರತಿ ಪಂಚಾಯಿತಿಗೆ ಆರು ಸಾವಿರ ಅನುದಾನವನ್ನು ನೀಡಲಾಗುವುದು. ಶಿಲಾಫಲಕವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಅಭಿವೃದ್ಧಿ ಭಾರತದ ನಿರ್ಮಾಣದಲ್ಲಿ ನಾನು ಪಾಲ್ಗೊಳ್ಳುವುದಾಗಿ, ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹನ್ನು ತೊಡೆದು ಹಾಕುವುದಾಗಿ, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದಾಗಿ, ದೇಶದ ಏಕತೆ ಮತ್ತು ಒಗ್ಗಟ್ಟಾಗಿ ಶ್ರಮಿಸುವುದಾಗಿ ಹಾಗೂ ದೇಶಕ್ಕಾಗಿ ನನ್ನ ಕರ್ತವ್ಯ ಮತ್ತು ಜವಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಪಂಚಪ್ರಾಣ ಶಪಥವನ್ನು ಮಾಡಬೇಕು ಎಂದು ಹೇಳಿದರು.