ಸುದ್ದಿಮೂಲ ವಾರ್ತೆ
ನವದೆಹಲಿ, ಆ.10: ಮಣಿಪುರ ಹಿಂಸಾಚಾರ ಕುರಿತಂತೆ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಗುರುವಾರ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿಯೂ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು. ಕೇಂದ್ರ ಸರ್ಕಾರದ ಮೇಲೆ ದೇಶದ ಜನತೆಗೆ ವಿಶ್ವಾಸವಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ, ಬಿಜೆಪಿ ಎಲ್ಲಾ ದಾಖಲೆ ಮುರಿದು ಮತ್ತೆ ಅಧಿಕಾರಕ್ಕೆ ಬರುತ್ತದೆ. ವಿಪಕ್ಷಗಳು 2028ರಲ್ಲೂ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ವ್ಯಂಗ್ಯವಾಡಿದರು.
ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಆದರೆ, ಅವರು ಬರೀ ನೋಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಸಿಕ್ಸ್, ಫೋರ್ಗಳು ಬಾರಿಸಿದ್ದಾರೆ ಎಂದ ಪ್ರಧಾನಿ ಮೋದಿ, ಎಲ್ಲರೂ ಶ್ರಮ ಪಡಿ, 2018ರಲ್ಲೂ ಇದನ್ನು ಹೇಳಿದ್ದೇ, ನಿಮಗೆ ತಯಾರಿ ಮಾಡಿಕೊಳ್ಳಲು 5 ವರ್ಷ ನೀಡಿದ್ದೇನೆ. ಏನು ದರಿದ್ರ ನೋಡಿ ಇನ್ನೂ ನೀವು ತಯಾರಿ ಮಾಡಿಕೊಂಡಿಲ್ಲ ಎಂದು ವಿಪಕ್ಷಗಳ ಬಗ್ಗೆ ವ್ಯಂಗ್ಯವಾಡಿದರು.
1999ರಲ್ಲೂ ಶರದ್ ಪವಾರ್ ಅವರು ನೇತೃತ್ವದಲ್ಲಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷ ನಾಯಕಾರಿದ್ದರು. ಅಧೀರ್ ರಂಜನ್ ಅವರಿಗೆ ಮಾತನಾಡಲು ವಿಪಕ್ಷ ನಾಯಕರು ಬಿಡುತ್ತಿಲ್ಲ. ಕಾಂಗ್ರೆಸ್ ಅವರನ್ನು ಮೂಲೆಗುಂಪು ಮಾಡಿದೆ. ಬಹುಶಃ ಕೋಲ್ಕತ್ತದಿಂದ ಕರೆ ಬಂದಿರಬೇಕು ಎಂದರು.
ವಿರೋಧ ಪಕ್ಷಗಳ ನಾಯಕರಿಗೆ ಬಡವರ ಹಸಿವಿನ ಬಗ್ಗೆ ಚಿಂತೆಯಿಲ್ಲ, ನಿಮಗೆ ಅಧಿಕಾರದ ಬಗ್ಗೆ ಮಾತ್ರ ಚಿಂತೆ. ನೀವು ಯುವಕರ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ಆದರೆ ನಿಮ್ಮ ಭವಿಷ್ಯದ ಬಗ್ಗೆ ಮಾತ್ರ ಎಂದು ಮೋದಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದ ಜನರು 30 ವರ್ಷಗಳ ನಂತರ ಪೂರ್ಣ ಬಹುಮತದ ಸರ್ಕಾರವನ್ನು ನೀಡಿದ್ದಾರೆ. ಆದರೆ ಬಡ ಕುಟುಂಬದ ಮಗ ಪ್ರಧಾನಿಯಾದದ್ದು ಹೇಗೆ ಎಂಬುದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದರು.
ವಿರೋಧ ಪಕ್ಷಗಳು ಮಾತನಾಡುತ್ತಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ವಿಪಕ್ಷಗಳು ಯಾವಾಗಲೂ ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ. ನೀವು ಏನೇ ಪ್ರಯತ್ನ ಮಾಡಿದರೂ ಸಹ 2024ರಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನನ್ನ ಮೂರನೇ ಅವಧಿಯಲ್ಲಿ ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
‘ಭಾರತ ಮಣಿಪುರ ಜೊತೆಗಿದೆ’
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಉತ್ತರ ನೀಡಿದ ಪ್ರಧಾನಿ ಮೋದಿ, ರಾಹುಲ್ಗಾಂಧಿ ನೀಡಿದ್ದ ಭಾರತ ಮಾತೆಯ ಕಗ್ಗೊಲೆಯಾಗಿದೆ ಎಂಬ ಹೇಳಿಕೆಗೆ ಪ್ರತಿಯಾಗಿ ‘ಭಾರತವು ಮಣಿಪುರದ ಜೊತೆಗಿದೆ’ ಎಂದು ಭರವಸೆ ನೀಡಿದರು.
ಮಣಿಪುರದಲ್ಲಿ ಗಲಭೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ ಎಂದರು.
ಮಣಿಪುರದ ಹೆಣ್ಣುಮಕ್ಕಳೊಂದಿಗೆ ಭಾರತವು ನಿಲ್ಲಲಿದೆ. ಆ ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಈ ಸದನದಲ್ಲಿ ಭಾರತ ಮಾತೆಯ ಬಗ್ಗೆ ಏನೇ ಹೇಳಿದರೂ ಅದು ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಕೆಲವರು ‘ಮಾ ಭಾರತಿ’ ಸಾವಿನ ಬಗ್ಗೆ ಮಾತನಾಡಿದ್ದಾರೆ, ಇದಕ್ಕಿಂತ ದುರದೃಷ್ಟಕರ ಏನಿದೆ ಎಂದು ಮೋದಿ ಹೇಳಿದರು.
ಮಣಿಪುರದಲ್ಲಿ ಶಾಂತಿ ಸ್ಥಾಪನೆ ಬಗ್ಗೆ ಪ್ರಧಾನಿ ಮೋದಿ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷಗಳ ಸದಸ್ಯರು ‘ಮಣಿಪುರ.. ಮಣಿಪುರ.ಎಂದು ಘೋಷಣೆಗಳು ಕೂಗುತ್ತಾ ಸಭಾತ್ಯಾಗ ಮಾಡಿದರು.