ಸುದ್ದಿಮೂಲ ವಾರ್ತೆ
ಯಾದಗಿರಿ ಆ. 11:ಈ ಬಾರಿಯೂ ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ ರೈತರಲ್ಲಿ ಮತ್ತು ಜನರಲ್ಲಿ ಆತಂಕವನ್ನು ದೂರ ಮಾಡಿದ್ದಾಳೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮುಂಗಾರು ಆರಂಭದಲ್ಲಿ ವರುಣ ದೇವ ನಿರಾಸೆ ಮೂಡಿಸಿದ ಪರಿಣಾಮ ರೈತರು ಆತಂಕದಲ್ಲಿದ್ದರು. ಈ ಬಾರಿ ಡ್ಯಾಂ ಭರ್ತಿ ಆಗದಿದ್ರೆ ಬೆಳೆ ಬೆಳೆಯಲಾಗದ ಮತ್ತು ಕುಡಿಯಲು ನೀರು ಇಲ್ಲದೆ ಇರುವ ಆತಂಕವಿತ್ತು. ಆರಂಭದಲ್ಲಿ ಮುಂಗಾರು ಕೈಕೊಟ್ಟರೂ ಕಡೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ಭರ್ತಿಯತ್ತ ಸಾಗಿರುವುದು ಸಂತಸ ತಂದಿದೆ ಎಂದು ಸಚಿವರು ನುಡಿದರು.
ಜಲಾಶಯ ಭರ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಆದರೆ ಈಗ ಸತತ ಒಳಹರಿವು ಹೆಚ್ಚಳವಾಗಿದ್ದರಿಂದ ಜಲಾಶಯ ಭರ್ತಿಯ ಬಗ್ಗೆ ಇದ್ದ ಆತಂಕ ಈಗ ಸರಿದಿದೆ. ಕುಡಿಯುವ ನೀರಿಗಾಗಿ, ರೈತರ ಜಮೀನುಗಳಿಗೆ ನೀರಾವರಿಗಾಗಿ ನೀರನ್ನು ಕಾಲುವೆಗಳ ಮೂಲಕ ಹರಿಸುವುದನ್ನು ಆರಂಭಿಸಲಾಗಿದೆ .ನಾರಾಯಣಪುರ ಜಲಾಶಯದಿಂದ ಜುಲೈ 22 ರಿಂದ ಒಳ ಹರಿವು ಪ್ರಾರಂಭವಾಗಿದ್ದು ಇದುವರೆಗೆ 71.50 ಟಿಎಮ್ಸಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡಲು ಜಲಜೀವನ್ ಮೀಷನ್ ಯೋಜನೆಯಡಿ ನಡೆಯುತ್ತಿರುವ ಜಾಕ್ವೇಲ್ ಕಾಮಗಾರಿ ಪರಿಶೀಲಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬೂದಿಹಾಳ ಪೀರಾಪುರ ಯೋಜನೆ ವಿಸ್ತರಣಾ ಕಾಮಗಾರಿ ಪರಿಶೀಲಿಸಿ,ಬರುವ ಮಾರ್ಚ.ಅಂತ್ಯ ರೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಹುಣಸಗಿ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಆರ್. ಮಂಜುನಾಥ, ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ಮುದಗಲ್, ತಹಶೀಲ್ದಾರ ಬಸವಲಿಂಗಪ್ಪ ನಾಯ್ಕೋಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.