ಸುದ್ದಿಮೂಲ ವಾರ್ತೆ
ನವದೆಹಲಿ, ಆ.11: ಐಪಿಸಿ ಮತ್ತು ಸಿಆರ್ಪಿಸಿ ಕಾನೂನುಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಪ್ರಾಪ್ತರ ಮೇಲೆ ಅತ್ಯಾಚಾರ, ಗ್ಯಾಂಗ್ ರೇಪ್, ದೇಶದ್ರೋಹದಂತಹ ಪ್ರಕರಣಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಠಿಣಗೊಳಿಸುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದರು.
ಭಾರತೀಯ ದಂಡ ಸಂಹಿತೆ ( ಐಪಿಸಿ ), ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ( ಸಿಆರ್ಪಿಸಿ ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಅನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ 2023ನ್ನು ಅಮಿತ್ ಶಾ ಅವರು ಹೊಸ ಮಸೂದೆ ಮಂಡಿಸಿದರು.
1980ರ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಅಪರಾಧ ದಂಡ ಸಂಹಿತೆ (ಸಿಆರ್ಪಿಸಿ) ಬದಲಿಗೆ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ 1872ರ ಪರ್ಯಾಯವಾಗಿ ಭಾರತೀಯ ಸಾಕ್ಷ್ಯ ಮಸೂದೆ ಪ್ರಸ್ತಾಪಿಸಲಾಗಿದೆ. ಐಪಿಸಿ 511 ವಿಭಾಗಗಳನ್ನು ಹೊಂದಿತ್ತು. ಈಗ ಅದನ್ನು 356 ವಿಭಾಗಗಳಿಗೆ ಪರಿಷ್ಕರಿಸಲಾಗಿದೆ. 175 ಪರಿಚ್ಛೇದಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಐಪಿಸಿ ಸೆಕ್ಷನ್ಗಳು ಕಳೆದ 160 ವರ್ಷಗಳಿಂದ ಜಾರಿಯಲ್ಲಿವೆ. ಈ ಕಾಯ್ದೆಗಳನ್ನು ಬ್ರಿಟಿಷರು 1860ರಲ್ಲಿ ರೂಪಿಸಿದ್ದರು. ವಸಾಹತು ಕಾಲದಿಂದಲೂ ಇರುವಂತಹ ಈ ಕಾನೂನು ಮತ್ತು ಸಂಹಿತೆಗಳಿಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2023 ಜಾರಿಗೆ ಬರಲಿದೆ ಎಂದು ಅಮಿತ್ ಶಾ ಹೇಳಿದರು.
ಭಾರತೀಯ ನ್ಯಾಯ ಸಂಹಿತೆಯು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳ ವಿರುದ್ಧದ ಕಾನೂನುಗಳನ್ನು ಒಳಗೊಂಡಿದೆ. ಕಾನೂನು ಆಯೋಗವು ದೇಶದ್ರೋಹ ಕಾನೂನನ್ನು ಬಲವಾಗಿ ಬೆಂಬಲಿಸಿದೆ. ಈ ಕಾನೂನಿನಲ್ಲಿ ಬದಲಾವಣೆ ತರಬೇಕು. ಕೆಲ ಮಹತ್ವದ ಬದಲಾವಣೆಗೊಂದಿಗೆ ಈ ಕಾನೂನನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿತ್ತು.
ದೇಶದ್ರೋಹಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಅಥವಾ ಏಳು ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸುವಂತೆ ಆಯೋಗವು ಶಿಫಾರಸು ಮಾಡಿತ್ತು. ಇದನ್ನು ಇಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯಲ್ಲಿ ಜಾರಿಗೆ ತಂದಿದ್ದಾರೆ. ಇದಕ್ಕೆ ನ್ಯಾಯ ಸಂಹಿತೆಯ ಸೆಕ್ಷನ್ 150 ಎಂದು ಹೆಸರಿಸಲಾಗಿದೆ.
ಕಠಿಣ ಶಿಕ್ಷೆಗಳು:
ಪ್ರತ್ಯೇಕತೆ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಅಥವಾ ಸಾರ್ವಭೌಮತ್ವ ಅಥವಾ ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧಕ್ಕೆ ಶಿಕ್ಷೆ ನೀಡುವ ಪರಿಷ್ಕೃತ ಕಾನೂನು ರೂಪಿಸಲಾಗುವುದು. ದೇಶದಲ್ಲಿ ಪ್ರತ್ಯೇಕತೆ, ಸಶಸ್ತ್ರ ಬಂಡಾಯ, ವಿಧ್ವಂಸಕ ಕೃತ್ಯಗಳು ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಕುರಿತು ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ಉಲ್ಲೇಖವಾಗಿದೆ. ವ್ಯಕ್ತಿಯೊಬ್ಬ ಈ ಮೇಲ್ಕಂಡ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಆತನಿಗೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಇದು ಹೇಳುತ್ತದೆ.
ಹೇಳಿಕೆಗಳು, ಬರವಣಿಗೆ, ಚಿಹ್ನೆ, ಸಂವಹನ, ಹಣಕಾಸಿನ ವಿಧಾನಗಳ ಮೂಲಕ ಪ್ರತ್ಯೇಕತೆಯನ್ನು ಪ್ರಚೋದಿಸುವುದು, ಸಶಸ್ತ್ರ ದಂಗೆಗೆ ಪ್ರೋತ್ಸಾಹ ನೀಡುವುದು, ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಆರೋಪಿಗೆ ಈ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ಹೇಳಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಅಸಮಾಧಾನವನ್ನು ಹೊರಹಾಕಬಹುದು. ಆದರೆ, ಇದು ದ್ವೇಷದ ಭಾವನೆಗಳನ್ನು ಕೆರಳಿಸುವಂತಿರಬಾರದು.
ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬಹುದು. ವ್ಯವಸ್ಥೆಯನ್ನು ಟೀಕಿಸುವ ಭರದಲ್ಲಿ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಹುಟ್ಟುಹಾಕುವಂತಿಲ್ಲ ಎಂದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 150 ರಲ್ಲಿ ವಿವರಿಸಿದೆ.
ಗುಂಪು ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆ ವರೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಕ್ರಿಮಿನಲ್ ಕಾನೂನುಗಳಲ್ಲಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಗುಂಪು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯು ಕನಿಷ್ಠ ಏಳು ವರ್ಷಗಳಿಂದ ಮರಣದಂಡನೆಯವರೆಗೆ ಇರಲಿದೆ ಎಂದು ಹೇಳಿದ್ದಾರೆ.
ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ ವಿಧಿಸುವುದನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತೀಯ ದಂಡ ಸಂಹಿತೆ , ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಬದಲಿಸುವ ಮಸೂದೆಯನ್ನು ಅಮಿತ್ ಶಾ ಮಂಡಿಸಿದ್ದಾರೆ.
ಮುಕ್ತಾಯಗೊಂಡ ಲೋಕಸಭಾ ಅಧಿವೇಶನ ಮಣಿಪುರದ ಗಲಭೆ ಬಗ್ಗೆ ಚರ್ಚೆ, ರಾಹುಲ್ಗಾಂಧಿ ಸಂಸತ್ತಿಗೆ ಮರು ಪ್ರವೇಶ ಸೇರಿದಂತೆ, ಐಪಿಸಿ ಸಿಆರ್ಪಿಸಿ ಕಾನೂನುಗಳ ಪರಿಷ್ಕರಣೆ ಸೇರಿದಂತೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದ ಲೋಕಸಭೆ ಮುಂಗಾರು ಅಧಿವೇಶನ ಶುಕ್ರವಾರ ಮುಕ್ತಾಯಗೊಂಡು, ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಈ ಬಾರಿ ಪ್ರಮುಖ ವಿಷಯವಾಗಿತ್ತು. ಎಲ್ಲಾ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಅಲ್ಲದೆ, ಪ್ರಧಾನಿ ಮೇಲೆ ಅವಿಶ್ವಾಸ ನಿರ್ಣಯವನ್ನೂ ಮಂಡಿಸಲಾಯಿತು. ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಪ್ರಧಾನಿ ವಿಶ್ವಾಸ ನೀಡಿದರಾದರೂ ಅದರಿಂದ ಪ್ರತಿಪಕ್ಷಗಳು ತೃಪ್ತರಾಗಲಿಲ್ಲ.
ಒಟ್ಟು 17 ದಿನಗಳ ಕಾಲ ನಡೆದ ಸಂಸತ್ ಅಧಿವೇಶನದಲ್ಲಿ 44 ತಾಸು 13 ನಿಮಿಷಗಳ ಕಾಲ ಚರ್ಚೆ ನಡೆದಿವೆ. 20 ವಿಧೇಯಕಗಳನ್ನು ಮಂಡಿಸಿದ್ದರೆ, 22 ಕರಡು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ವೇಳೆ ರಾಜ್ಯಸಭೆ ಕಲಾಪವನ್ನೂ ಸಹ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.