ಮೈಸೂರು, ಆ.12:ರಾಜ್ಯ ವಕೀಲರ ಬಹುದಿನಗಳ ಬೇಡಿಕೆಯಾದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ.
ಮೈಸೂರಿನಲ್ಲಿ ಶನಿವಾರ ರಾಜ್ಯ ವಕೀಲರ ಪರೀಷತ್ ಆಶ್ತಯದಲ್ಲಿ ನಡೆದ ವಕೀಲರ ರಾಜ್ಯಮಟ್ಟದ 10 ನೇ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಅಧಿವೇಶನದಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ವಕೀಲರ ಎಲ್ಲಾ ಬೇಡಿಕೆ ಈಡೇರಿಸಲು ಒಮ್ಮೆಲೆ ಸಾಧ್ಯವಿಲ್ಲ .ಆದರೆ, ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗಿವುದು ಎಂದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಾನು ಮಾತನಾಡಿದ್ದೇನೆ. ಹಿಂದಿನ ಸರ್ಕಾರ ಈ ಕಾನೂನು ಕುರಿತು ಪ್ರಸ್ತಾಪಿಸಿತ್ತು. ಮೊದಲ ಅಧಿವೇಶನದಲ್ಲೇ ಆ ಕಾಯ್ದೆ ಪಾಸ್ ಮಾಡಬೇಕಿತ್ತು. ಅನಿವಾರ್ಯವಾಗಿ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಉಳಿವು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಜನರು ಏನೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಈ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದ ಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಸಮಾಜದಲ್ಲಿ ಇರುವ ಅಸಮಾನತೆ ತೊಡೆದುಹಾಕಲು ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಎಲ್ಲರೂ ಓದಿದರೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಳ ನ್ಯಾಯಾಲಯಗಳಲ್ಲಿ ಮೀಸಲಾತಿ ಇದೆ. ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಮೀಸಲಾತಿ ಜಾರಿಯಾದರೆ ಹೆಚ್ಚು ಉಪಯುಕ್ತವಾದ ನ್ಯಾಯದಾನ ನೀಡಲು ಸಾಧ್ಯ ಎಂದು ಪ್ರತಿಪಾದಿಸಿದರು.
ನ್ಯಾಯದಾನ ವ್ಯವಸ್ಥೆ ಸ್ವಾತಂತ್ರ್ಯ ದೊರೆತ ನಂತರ ಭಿನ್ನವಾಗಿದೆ. ಅದಕ್ಕೂ ಮುನ್ನ ರಾಜ ಮಹಾರಾಜರು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಅವರ ತೀರ್ಮಾನ ಮನುವಾದದ ರೀತಿಯ ಮೇಲೆ ತೀರ್ಮಾನವಾಗುತ್ತಿದ್ದವು. ಜಾತಿ ವ್ಯವಸ್ಥೆ ಬಲವಾಗಿದ್ದುದರಿಂದ ಒಂದೇ ರೀತಿಯ ತಪ್ಪಿಗೆ ಬೇರೆ ಬೇರೆ ಶಿಕ್ಷೆಗಳಿದ್ದವು. ಶ್ರೀಮಂತರಿಗೆ, ಮೇಲ್ಜಾತಿಯವರಿಗೆ, ಕೆಲವರ್ಗದವರಿಗೆ, ಬಡವರಿಗೆ ಬೇರೆ ರೀತಿಯ ಶಿಕ್ಷೆ ಆಗುತ್ತಿತ್ತು. ಸಂವಿಧಾನ ಬಂದ ನಂತರ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ವಿಶ್ಲೇಷಿಸಿದರು.
ಹಿಂದೆ ಎಲ್ಲಾ ಮೇಲ್ವರ್ಗದವರೇ ವಕೀಲರಾಗಿದ್ದರು. ಕಳಜಾತಿಯವರಿಗೆ ವಕೀಲರಾಗುವುದು ಬೇಡ ಎಂದೂ ಹೇಳುತ್ತಿದ್ದದ್ದು ನನಗೆ ಅನುಭವವಾಗಿದೆ. ಶಾನುಭೋಗರೊಬ್ಬರು ಮಗನನ್ನು ಕಾನೂನು ಕಲಿಸಬೇಡ ಎಂದು ತಮ್ಮ ತಂದೆಗೆ ಹೇಳಿದ್ದರು. ಅವರ ಮಾತು ಕೇಳಿ ಕಾನೂನು ಓದದೇ ಹೋಗಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಸಂದರ್ಭದಲ್ಲಿ ಎಲ್ಲಾ ಕಾಲದಲ್ಲೂ ಇದ್ದಾರೆ ಎಂದರು.