ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 13 : ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಂತಿನಿರತ ರೈತರನ್ನು ಪೊಲೀಸರಿಂದ ದಾಳಿ ಮಾಡಿಸಿದ್ದ ಕಾರಳ ನೆನೆಪಿನ ನಡುವೆ, ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿಯಾದರೂ ನಮ್ಮ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಸರ್ಕಾರ ಹಿಂಪಡೆಯುವ ಭರವಸೆಯಲ್ಲಿದ್ದೇವೆ ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ಪಟ್ಡಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊಸ ಸರ್ಕಾರವೂ ಅಸ್ತಿತ್ವಕ್ಕೆ ಬಂದಿದ್ದು, ರೈತಪರ ನಿಲುವು ಹೊಂದಬೇಕು’ ಎಂದು ಒತ್ತಾಯಿಸಿದರು.
ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಸಿದ್ದರಾಮಯ್ಯರವರು ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಭರವಸೆ ನೀಡಿದ್ದರು, ಇದೀಗಾ ಅವರೇ ಮುಖ್ಯಮಂತ್ರಿಯಾಗಿದ್ದು ಕೂಡಲೇ ರೈತಪರವಾಗಿ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪರವರು ಧರಣಿ ಸ್ಥಳಕ್ಕೆ ಭೇಟಿಯಾದಾಗ ಹಾಗೂ ರೈತ ಹೋರಾಟಗಾರರೊಂದಿಗೆ ಸಭೆ ನಡೆಸಿದಾಗಲೂ ಅತೀ ಶೀಘ್ರದಲ್ಲೇ ಶಾಶ್ವತ ಪರಿಹಾರ ನೀಡಲಾಗುವುದು ಎಂದಿದ್ದರೂ, ಹೋರಾಟ ಪ್ರಾರಂಭವಾಗಿ 500 ದಿನಗಳದರೂ ಯಾವ ಸರ್ಕಾರವೂ ಸ್ಪಷ್ಟ ನಿರ್ಧಾರ ತಳದೇ ಇರುವುದು ಬೇಸರದ ಸಂಗತಿ’ ಎಂದರು.
ರೈತ ಮುಖಂಡ ನಂಜಪ್ಪ ಮಾತನಾಡಿ, ‘ರೈತರ ಹೋರಾಟಕ್ಕೆ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಸ್ವಾಮಿಗಳಾದ ಡಾ.ನಿರ್ಮಲಾನಂದ ಸ್ವಾಮಿಗಳು ಬೆಂಬಲ ನೀಡಿದ್ದು, ಸಚಿವರಾದ ಮುನಿಯಪ್ಪರಿಗೆ ಈ ಕುರಿತು ತಿಳಿಸಿದ್ದಾರೆ. ಆದಾಗ್ಯೂ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ರೈತರನ್ನು ಶೋಷಿಸುತ್ತಿದೆ’ ಎಂದು ಬೇಸರಗೊಂಡರು.
ಇದೇ ವೇಳೆ ತಿಮ್ಮರಾಯಪ್ಪ, ರಮೇಶ್, ಮುಕುಂದ, ನಂದನ್, ವೆಂಕಟರಮಣ್ಣಪ್ಪ ಸೇರಿದಂತೆ ಇತರರು ಇದ್ದರು.
ಕರಾಳ ದಿನದ ನೆನೆಪಿಗೆ ರೈತ ನಡಿಗೆ ತಾಲ್ಲೂಕಿನ ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನಮ್ಮ ಭೂಮಿ ಕಬ್ಬಳಿಸಲು ಬ್ರಿಟಿಷರ ಸಂತತಿಯಂತೆ ದಾಳಿ ಮಾಡುತ್ತಿರುವ ಬಂಡವಾಳಶಾಯಿಗಳ ವಿರುದ್ಧ ಭೂ ಸ್ವಾಧೀನದಿಂದ ಬಾಧಿತವಾಗುವ 13 ಹಳ್ಳಿಗಳಲ್ಲಿಯೂ ‘ಕೃಷಿ ಭೂಮಿ ಸ್ವತಂತ್ರಕ್ಕಾಗಿ ರೈತರ ನಡಿಗೆ’ ಜಾಗೃತಿ ಜಾಥ ಹಮ್ಮಿಕೊಳ್ಳಲಿದ್ದು, ಈ ಬಾರಿ ಜಿಲ್ಲಾ ಕಾರ್ಯಕ್ರಮಕ್ಕೆ ಯಾವುದೇ ಮುತ್ತಿಗೆ, ಪ್ರತಿಭಟನೆ ಮಾಡುವುದಿಲ್ಲ’ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.