ಸುದ್ದಿಮೂಲ ವಾರ್ತೆ
ತುಮಕೂರು, ಆ.14: ಕ್ಯಾತ್ಸಂದ್ರದ ಸಿದ್ಧಗಂಗಾಮಠದ ಬಳಿ ಇರುವ ಗೋಕಟ್ಟೆಯಲ್ಲಿ ಕಾಲು ಜಾರಿ ಬಿದ್ದ ರಂಜಿತ್ ನನ್ನು ರಕ್ಷಿಸಲು ಹೋದ ಆತನ ತಾಯಿ ಲಕ್ಷ್ಮೀ ಸ್ನೇಹಿತರಾದ ಶಂಕರ, ಹರ್ಷಿತ್ ಮತ್ತು ಮಹದೇವಪ್ಪ ಈ ನಾಲ್ವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನಾ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಶ್ರೀ ಮಠದ ಸ್ವಾಮಿಜೀಗಳೊಂದಿಗೆ ಈ ಕುರಿತಾಗಿ ಚರ್ಚಿಸಿದರು.
ಬಳಿಕ ಮೃತರ ಕುಟುಂಬಸ್ಥರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿಯೇ ಮೃತ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುಂಜಾಗೃತ ಕ್ರಮಗಳನ್ನು ಅನುಸರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆಗಳ ಸುತ್ತಮುತ್ತ ಇರುವಂತಹ ಕೆರೆ ಕಟ್ಟೆ ಸ್ಥಳಗಳಿಗೆ ಮಕ್ಕಳು ತೆರಳದಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಜಿ.ಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಾಪೂರ್ವಾಡ್ ಉಪಸ್ಥಿತರಿದ್ದರು.