ಸುದ್ದಿಮೂಲ ವಾರ್ತೆ
ತುಮಕೂರು, ಆ.15 : ನಮ್ಮ ಸಂವಿಧಾನದ ಮೂಲಾಧಾರವಾಗಿರುವ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ದೇಶದ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸುತ್ತಾ, ಶಾಂತಿ-ಸಹನೆ, ಸಹಿಷ್ಣುತೆಯ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಬ್ರಿಟಿಷರಿಂದ ಸ್ವಾತಂತ್ರ್ಯ ಬಂದ ನಂತರ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ.
ದೇಶ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರವು ಕಳೆದ ಎರಡು ತಿಂಗಳಿನಿಂದ ಜನಪರ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದು, ಚುನಾವಣಾ ಪೂರ್ವದ ಪ್ರಣಾಳಿಕೆಯ ಘೋಷಣೆಗಳನ್ನು ಹಂತ ಹಂತವಾಗಿ ರಾಜ್ಯದ ಜನತೆಗೆ ಅನುಷ್ಠಾನಗೊಳಿಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎನ್ನುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.
ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಹಾಗೂ ಬೇಡಿಕೆಗಳ ಪೂರೈಕೆಗನುಗುಣವಾಗಿ ಹಾಲಿ ಅಭಿವೃದ್ಧಿಯಾಗಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ, ವಸಂತನರಸಾಪುರ 4ನೇ ಹಂತದ ಕೈಗಾರಿಕಾ ಪ್ರದೇಶ ರಚನೆಗೆ ತೀರ್ಮಾನಿಸಲಾಗಿದೆ. ಈ ಕೈಗಾರಿಕಾ ಪ್ರದೇಶವನ್ನು ವಿಭಿನ್ನವಾಗಿ ಹಾಗೂ
ಕೈಗಾರಿಕಾ ಸ್ನೇಹಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿಯಿಂದ “ತುಮಕೂರು ಇಂಡಸ್ಟ್ರಿಯಲ್ ಟೌನ್ಶಿಪ್ ಲಿಮಿಟೆಡ್” ಶಿರೋನಾಮೆಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದರು.
ಸೆಪ್ಟೆಂಬರ್ ನಲ್ಲಿ ಜಿಲ್ಲಾ ಮಟ್ಟದ ಪ್ರತಿಷ್ಠಿತ ಕೈಗಾರಿಕಾ ಮಾಲೀಕರ ಸಮಾವೇಶವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಸಮಾವೇಶದಲ್ಲಿ ರಾಜ್ಯ ಪ್ರತಿಷ್ಠಿತ ಕೈಗಾರಿಕೆಗಳ ಮುಖ್ಯಸ್ಥರು, ಜಿಲ್ಲೆಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಮುಖ್ಯಸ್ಥರನ್ನು ಆಹ್ವಾನಿಸಲು ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದರು.
ತುಮಕೂರು ಮಹಾನಗರಪಾಲಿಕೆ ಸೇರಿದಂತೆ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಸಮಾನ ವೇತನ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದಂತಹ ಒಟ್ಟು 275 ಸಂಖ್ಯೆಯ ಪೌರ ಕಾರ್ಮಿಕರು ಸೇವೆಯನ್ನು ಖಾಯಂಗೊಳಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಮೇಯರ್ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್,ಪಾಲಿಕೆ ಆಯುಕ್ತೆ ಆಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಸಾರ್ವಜನಿಕರು, ವಿವಿಧಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು.