ಸುದ್ದಿಮೂಲ ವಾರ್ತೆ
ಮೈಸೂರು, ಆ.15 : ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದ ರಾಮಶೆಟ್ಟಿ ಎಂಬುವವರ ಪುತ್ರ ವೀರಯೋಧ ಸುರೇಶ್(40) ಹೃದಯಾಘಾತದಿಂದ ರಾತ್ರಿ ನಿಧನರಾಗಿದ್ದಾರೆ. ಮೃತರು ಕಳೆದ 16 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತಿದ್ದರು.
ಆ.2 ರಂದು ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದು, ತಮ್ಮ ಐದು ವರ್ಷದ ಪುತ್ರಿ ಪೃಕೃತಿಯ ಹುಟ್ಟು ಹಬ್ಬದ ನಿಮಿತ್ತ ಅನಾಥಾಶ್ರಮಕ್ಕೆ ಊಟವನ್ನು ಕೊಡಲು ಮನೆಯಿಂದ ಹೊರಟು ನಿಂತಿದ್ದಾಗ ಎದೆ ನೋವು ಬಂದು ಅಸ್ವಸ್ಥಗೊಂಡಿದ್ದಾರೆ.
ಅವರನ್ನು ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ಮೃತ ಸೈನಿಕನ ಪತ್ನಿ ಎ.ಎಂ.ಸೌಮ್ಯ ಮಧ್ಯಾಹ್ನ 3.30ರಲ್ಲಿ ಪಟ್ಟಣದ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ. ಮೃತರು ಪತ್ನಿ ಸೌಮ್ಯ, ಪುತ್ರಿ ಪೃಕೃತಿ ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.