ಸುದ್ದಿಮೂಲವಾರ್ತೆ
ಕೊಪ್ಪಳ ಆ 19: ಧರ್ಮಸ್ಥಳದಲ್ಲಿ 2012ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವತಿ ಸೌಜನ್ಯ ಸಾವಿಗೆ ನ್ಯಾಯ ಸಿಗುವಂತೆ ಒತ್ತಾಯಿಸಿ ಆ.26ರಿಂದ ಬೆಳ್ತಂಗಡಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಆರ್ ಎಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷೆ ಆಶಾ ವಿರೇಶ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆಗಷ್ಟ್ 26ರಂದು ಆರಂಭವಾಗುವ 14 ದಿನಗಳ ಪಾದಯಾತ್ರೆ ಸೆಪ್ಟೆಂಬರ್ 7ರಂದು ಬೆಂಗಳೂರಿನ ವಿಧಾನಸೌಧ ತಲುಪಲಿದೆ ಎಂದರು.
ಸೌಜನ್ಯ ಸಾವು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರುತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು, ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇಂತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಮತ್ತು ಕುಟುಂಬಸ್ಥರಿಗೆ ಮಾನಸಿಕ, ಅರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ತನಿಖೆ ಹಾಗೂ ನ್ಯಾಯಾಲಯದಲ್ಲಿನ ವಿಚಾರಣೆ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆಗಾಗಿ ‘ಸೌಜನ್ಯ ಮಹಿಳಾ ಸುರಕ್ಷ ಆಯೋಗ’ ಸ್ಥಾಪಿಸಬೇಕು. ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳ ತನಿಖೆಗೆ ಸಿಐಡಿ ಮಾದರಿಯಲ್ಲಿ ಪಡೆಯನ್ನು ಸೃಜಿಸಬೇಕು ಹಾಗೂ ಅತ್ಯಾಚಾರ, ಕೊಲೆ ಘಟನೆಗಳು ಜರುಗದಂತೆ ಸರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದು ಸ್ವಾಗತ. ಆದರೆ, ಈ ಯೋಜನೆಗಳು ನಿರಂತರವಾಗಿ ಮುಂದುವರೆಯಬೇಕಾದರೆ ಸಂಪನ್ಮೂಲ ಕ್ರೋಡೀಕರಣ ಅವಶ್ಯಕವಾಗಿದ್ದು, ಅಭಿವೃದ್ಧಿ ಯೋಜನೆಗಳು ಕುಂಠಿತವಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಕೆಆರ್ ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಚ್ ಗೊಡಚಳ್ಳಿ ಇದ್ದರು.