ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.19: ವಿಧಾನ ಪರಿಷತ್ತಿಗೆ ಮೂರು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಸಂಬಂಧ ಸರ್ಕಾರ ಕಳುಹಿಸಿದ ಎಂ.ಆರ್. ಸೀತಾರಾಂ, ಉಮಾಶ್ರೀ ಮತ್ತು ಸುಧಾಮ್ ದಾಸ್ ಅವರ ಹೆಸರುಗಳಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.15ರಂದು ಕಳುಹಿಸಿದ ಶಿಫಾರಸು ಪಟ್ಟಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಂಗೀಕಾರ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರದಡಿ ಎಂ.ಆರ್. ಸೀತಾರಾಂ, ಕಲಾವಿದರ ಕೋಟಾದಡಿ ಉಮಾಶ್ರೀ ಮತ್ತು ಸಮಾಜ ಸೇವೆ ಕ್ಷೇತ್ರದಡಿ ಸುಧಾಮ್ ದಾಸ್ ಅವರ ಹೆಸರುಗಳನ್ನು ನಾಮ ನಿರ್ದೇಶಕ ಕೋರಿ ಶಿಫಾರಸು ಮಾಡಲಾಗಿತ್ತು.
ವಿರೋಧಿಸದರೂ ಫಲವಿಲ್ಲ:
ಸುಧಾಮ್ ದಾಸ್ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ನಾಲ್ವರು ಪರಿಶಿಷ್ಟ ಪಂಗಡದ ಸಚಿವರು ಪತ್ರ ಬರೆದಿದ್ದರೂ ಸಹ ಅದು ಫಲ ನೀಡಿಲ್ಲ. ವಿಧಾನ ಪರಿಷತ್ ಸದಸ್ಯರಾಗಿ ಸುಧಾಮ್ ದಾಸ್ ಆಯ್ಕೆ ಅಂತಿಮಗೊಂಡಿದೆ.
ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಮತ್ತು ಆರ್.ಬಿ. ತಿಮ್ಮಾಪುರೆ ಅವರು ಸುಧಾಮ್ ದಾಸ್ ಆಯ್ಕೆ ವಿರೋಧಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದರು.
‘ಸುಧಾಮ್ ದಾಸ್ ಅವರು ಕೇಂದ್ರ ಸರ್ಕಾರಿ ನೌಕರರಾಗಿದ್ದರು. ಮೂರ್ನಾಲ್ಕು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕಾಗಿ ಮೂವತ್ತು ವರ್ಷಗಳ ಕಾಲ ದುಡಿದವರಿಗೆ ಈಗ ಆದ್ಯತೆ ನೀಡಲಿ. ಮುಂದಿನ ದಿನಗಳಲ್ಲಿ ಸುಧಾಮ್ ದಾಸ್ ಅವರಿಗೂ ಅವರಿಗೆ ಅವಕಾಶ ನೀಡುವುದಕ್ಕೆ ವಿರೋಧವಿಲ್ಲ,’ ಎಂದು ಕೆ.ಎಚ್. ಮುನಿಯಪ್ಪ ಹಳಿಕೆ ನೀಡಿದ್ದರು.
ಹಿರಿಯ ನಾಯಕರ ವಿರೋಧದ ಮಧ್ಯೆಯೂ ಸಹ ಸುಧಾಮ್ ದಾಸ್ ಆಯ್ಕೆ ಅಂತಿಮಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.