ಸುದ್ದಿಮೂಲ ವಾರ್ತೆ
ಬೆಂಗಳೂರು,ಆ.21: ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿದೆ. ವಿಕ್ರಮ್ ಲ್ಯಾಂಡರ್ ತೆಗೆದ ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.
ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್ ಅವಾಯಿಡೆನ್ಸ್ ಕ್ಯಾಮೆರಾ ಎಲ್ಎಚ್ಡಿಎಸಿ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಈ ಕ್ಯಾಮೆರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯದೇ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ.
ಚಂದ್ರನ ಕಕ್ಷೆಯಲ್ಲಿ ಸಿಂಕ್ರೊನಸ್ ಆಗಿ ತಿರುಗುವಿಕೆಯಿಂದಾಗಿ ಚಿತ್ರಗಳಲ್ಲಿ ಸೆರೆಹಿಡಿಯಲಾದ ಮತ್ತೊಂದು ಭಾಗ ಭೂಮಿಗೆ ಕಾಣಿಸುವುದೇ ಇಲ್ಲ. ಇದೀಗ ಇಸ್ರೋದ ಕ್ಯಾಮೆರಾ ಆ ಭಾಗದ ಚಿತ್ರಗಳನ್ನು ತೆಗೆದಿದೆ. ಇದೇ ಬುಧವಾರ ಚಂದ್ರಯಾನ 3 ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ಇಳಿಯಲಿದೆ.
ಇದು ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಕೀರ್ತಿಗೆ ಪಾತ್ರವಾಗಿವೆ. ಈವರೆಗೂ ಯಾವುದೇ ದೇಶ ತನ್ನ ಗಗನ ಯಾನವನ್ನು ದಕ್ಷಿಣ ಧ್ರುವದ ಸಮೀಪ ಇಳಿಸಿಲ್ಲ. ಭಾರತ ಯಶಸ್ವಿಯಾದರೆ ಮೊದಲನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.