ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 23 : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ 100 ದಿನಗಳು ಪೂರೈಸಿದ್ದರೂ, ಇಂದಿಗೂ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಗೆ ನೀಡಿದ್ದ ವಚನವನ್ನು ನೇರವೇರಿಸಲು ಸಕಾಲ ಕೂಡಿಬಂದಿಲ್ಲ. ಈಗಾಗಲೇ ಹೋರಾಟ ಪ್ರಾರಂಭವಾಗಿ 506 ದಿನಗಳು ಕಳೆದರು ಸರ್ಕಾರಗಳು ರೈತರನ್ನು ಸತಾಯಿಸುತ್ತಿದೆ’ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯ ಮಾರೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚನ್ನರಾಯಪಟ್ಟಣ ನಾಡಕಚೇರಿಯ ಮುಂದೆ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಧರಣಿಯೂ 506ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬುಧವಾರ ಮಾತನಾಡಿದ ಅವರು, ‘ಸಾಲು ಸಾಲು ಹಬ್ಬ ಹರಿದಿನಗಳ ಈ ಸಮಯದಲ್ಲಿ ಲಕ್ಷಾಂತರ ಟನ್ ಹೂವು, ತರಕಾರಿ ಹಣ್ಣುಗಳನ್ನು ಸರಬರಾಜು ಮಾಡಿತ್ತಿರುವ ಫಲವತ್ತಾದ ಭೂಮಿಯನ್ನು ಕೆಐಎಡಿಬಿಯ ಕಪ್ಪಿ ಮುಷ್ಟಿಯಿಂದ ಬಿಡುಗಡೆಗೊಳ್ಳಿಸಲು ಸರ್ಕಾರ ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಈ ಹಿಂದಿನ ಬಿಜೆಪಿ ಸರ್ಕಾರವೂ ರೈತರ ಹೋರಾಟಗಳನ್ನು ಹತ್ತಿಕ್ಕಲು ಪ್ರಕರಣಗಳನ್ನು ದಾಖಲಿಸಿ, ಪೊಲೀಸರ ಲಾಠಿ, ಬೂಟುಗಳನ್ನು ಹೊಡೆಸಿದರು, ಆದರೆ, ಕಾಂಗ್ರೆಸ್ ಸರ್ಕಾರವೂ ನಿರ್ಲಿಪ್ತ ಧೋರಣೆಗಳು, ಜಾಣ ಕುರುಡಿನ ವರ್ತನೆಯೂ ರೈತರ ಬಾಳಿಗೆ ಕಂಟಕವಾಗಿ ಪರಿಣಮಿಸಿದೆ’ ಎಂದು ಆಕ್ರೋಶ ಹೊರಹಾಕಿದರು.
ಹಿರಿಯ ರೈತ ಹೋರಾಟಗಾರ ನಂಜಪ್ಪ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ 100 ದಿನದ ಸಂಭ್ರಮಾಚರಣೆಯಲ್ಲಿದ್ದರೇ, ರೈತರು ಮಾತ್ರ ಧರಣಿಯ ನೆಲದಲ್ಲಿ ಆಶಾಭಾವದಿಂದ ಸರ್ಕಾರದತ್ತ ನೋಡುತ್ತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಂದು ಸಿದ್ದರಾಮಯ್ಯರವರು ಸರ್ಕಾರ ಬಂದರೇ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಮಾತು ನೀಡಿದ್ದರು, ಇದೀಗ ಅವರೇ ಮುಖ್ಯಮಂತ್ರಿಗಳಾಗಿದ್ದು ಅದಷ್ಟು ಬೇಗ ನುಡಿದಂತೆ ನಡೆದು ರೈತರ ಬಾಳಲ್ಲಿ ಹೊಸ ಚೈತನ್ಯ ಮೂಡಿಸಲಿ’ ಎಂದು ಒತ್ತಾಯಿಸಿದರು.
ಇದೇ ವೇಳೆ ರೈತ ಮುಖಂಡರಾದ ಮುಕುಂದ, ಪ್ರಮೋದ್, ನಂದನ್, ರವಿ, ರಾಮಾಂಜಿನಪ್ಪ, ವೆಂಕಟರಮಣಪ್ಪ, ಲೋಕೇಶ್, ನಂಜೇಗೌಡ, ಗಣೇಶ್, ಮುನಿರಾಜು ಸೇರಿದಂತೆ ಇತರರು ಇದ್ದರು.
ಸೆಪ್ಟೆಂಬರ್ 10ರ ಒಳಗೆ ಮುಖ್ಯಮಂತ್ರಿಯೊಂದಿಗೆ ಸಭೆ
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಉದ್ದೇಶದಿಂದ ಭೂ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ ಕ್ರಮವನ್ನು ವಿರೋಧಿಸಿ ಕಳೆದ 506 ದಿನಗಳಿಂದ ಹೋರಾಟ ಮಾಡುತ್ತಿರುವ ಧರಣಿ ನಿರತ ರೈತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 10ರ ಒಳಗೆ ಸಭೆ ನಡೆಸಲಿದ್ದಾರೆ ಎಂದು ಪ್ರಾಂತ್ಯ ರೈತ ಸಂಘದ ರಾಜ್ಯ ಮುಖಂಡರು ತಿಳಿಸಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಕೆಐಎಡಿಬಿಯ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರಬೇಕು ಎಂದು ರೈತರು ಮನವಿ ಮಾಡಿದರು.