ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.25: ತಾಲೂಕಿನ ನಂದಗುಡಿಯಲ್ಲಿ ಶ್ರಾವಣ ಮಾಸದ 2ನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಅರಾಧಿಸಲು ಶ್ರದ್ಧಾ ಭಕ್ತಿಯ ನಡುವೆ ನಂದಗುಡಿಯಲ್ಲಿ ಮಹಿಳೆಯರು ಹಬ್ಬವನ್ನು ಸಡಗರ ಸಂಭ್ರಮದ ನಡುವೆ ಆಚರಿಸಿದರು.
ವಿಶೇಷವಾಗಿ ಹೊಸ ಬೆಳ್ಳಿಚಂಬು, ಬಿಂದಿಗೆ, ತಟ್ಟೆ, ಚಿನ್ನಾಭರಣ, ನಗದು ಹಣ ಸೇರಿದಂತೆ ವಿವಿಧ ಅಲಂಕಾರಿಕ ಹೂಗಳಿಂದ ಸಿಂಗರಿಸಿದ್ದರು. ಕಳಸಕ್ಕೆ ಲಕ್ಷ್ಮೀದೇವಿಯ ಮುಖವಾಡ ಇಟ್ಟು, ಬಗೆ-ಬಗೆಯ ಹಣ್ಣುಗಳಿಂದ ಅಲಂಕರಿಸಿದ್ದರು.
ಹಲವು ಬಗೆಯ ತಿಂಡಿಗಳನ್ನು ದೇವಿಯ ಮುಂದಿಟ್ಟು ಶ್ರದ್ಧೆಯಿಂದ ಪೂಜೆ ನೆರೆವೇರಿಸಿ, ಧನ ಕನಕಾಧಿಗಳನ್ನು ಕರುಣಿಸುವಂತೆ ವಿನೀತರಾಗಿ ಬೇಡಿಕೊಳ್ಳುತ್ತಿರುವದು ಕಂಡು ಬಂದಿತ್ತು. ಶ್ರಾವಣ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಪ್ರತಿ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ಈ ಹಬ್ಬವನ್ನು ಮನೆಯ ಹೆಂಗಳೆಯರು ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲೆಂದು ತಳಿರು ತೋರಣಗಳಿಂದ ಅಲಂಕೃತವಾದ ಪೀಠದಲ್ಲಿ ಲಕ್ಷ್ಮಿಯ ಕಳಸವಿಟ್ಟು, ವಿವಿಧ ಬಣ್ಣದ ಹೂಗಳು ಅಭರಣಗಳನ್ನು ತೊಡಿಸಿ, ವಿಧ ವಿಧದ ಅಲಂಕಾರಗಳಿಂದ ಶೃಂಗರಿಸಿ ಪೂಜಿಸಲಾಗುತ್ತದೆ.
ಮನೆಗಳಲ್ಲಿ ಲಕ್ಷ್ಮಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡುವುದರೊಂದಿಗೆ ನೆರೆ ಹೊರೆಯವರು, ನೆಂಟರಿಷ್ಠರ ಮಹಿಳೆಯರನ್ನು ಕುಂಕುಮಕ್ಕೆ ಅಹ್ವಾನಿಸುವುದರಲ್ಲಿ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು, ವಿಶೇಷವಾಗಿ ಬಗೆಬಗೆಯ ಸೀರೆಗಳನ್ನು ಧರಿಸಿ ಸಿಂಗಾರಗೊಂಡಿದ್ದರು. ವಿವಿಧ ದೇವತೆಗಳ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಾನಾ ಹೂಗಳಿಂದ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.