ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.26: ದೇವರ ಅಪ್ಪಣೆ ಇಲ್ಲದೆ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿ ಅಲುಗಾಡುವುದಿಲ್ಲ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ನಡೆದು ಜೀವನ ಸಾಗಿಸುವಂತಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಪಂ. ವ್ಯಾಪ್ತಿಯ ಮೋತಕದಹಳ್ಳಿಯಲ್ಲಿ ನಡೆದ ಶ್ರೀರಾಧಾ ರುಕ್ಮಣಿ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಪೂಜಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಮೌಢ್ಯ ಇಂದಿನ ಯುವ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು,
ದೇವರ ಮೇಲಿನ ಭಯ ಇಲ್ಲದಂತಾಗಿದೆ. ದೇವಾಲಯಗಳಿಗೆ ಹೋಗುವುದರಿಂದ ಮನಸ್ಸು ಶುದ್ದವಾಗುತ್ತದೆ. ಶಾಂತಿಗಾಗಿ ಹುಡುಕುವುದು ದೇವರನ್ನು, ಆದ್ದರಿಂದ ದೇವಾಲಯಗಳು ಶಾಂತಿಗೆ ಪೂರಕ ವಾತಾವರಣ ನಿರ್ಮಿಸಬೇಕು. ದೇವಾಲಯಗಳಲ್ಲಿ ಆಡಂಬರಬೇಕಿಲ್ಲ. ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು
ಬೆಳೆಸುವ ಪುಣ್ಯ ಕ್ಷೇತ್ರಗಳು ದೇವಾಲಯ ಆಗಿರುವುದರಿಂದ, ಮನುಷ್ಯನಿಗೆ ಸಮಸ್ಯೆಯಾದರೆ ನೆಮ್ಮದಿ ಸುಖ ಶಾಂತಿ ಪಡೆಯಲು ಎಲ್ಲರೂ ದೇವರ ಮೊರೆ ಹೋಗಬೇಕಾಗುತ್ತದೆ. ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ದೇವಾಲಯಗಳಲ್ಲಿ ಮಾನವನಿಗೆ ಶಕ್ತಿ ಸಿಗುತ್ತದೆ. ಪ್ರತಿಯೊಂದು ಹಳ್ಳಿಯಲ್ಲಿಯೂ ಧಾರ್ಮಿಕ ಕಾರ್ಯಗಳು ನಡೆಯುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ
ದೇವಾಲಯಗಳು ಸಹಕಾರಿಯಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿನ ಎಲ್ಲಾ ವರ್ಗದ ಜನರನ್ನು ಒಗ್ಗೂಡಸಲಿವೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ, ಆಹಾರ ಮತ್ತು ನಾಗರಿಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಂ.ಸಿ. ಶ್ರೀನಿವಾಸಯ್ಯ, ಮೋತಕದಹಳ್ಳಿ ಗ್ರಾಮದ ಮುಖಂಡರಾದ ಎಂಸಿ ಮುನಿರಾಜು, ಎಮ್.ಸಿ. ಕುಮಾರ್, ಶಿವಕುಮಾರ್, ಅಶ್ವಥ್ ನಾರಾಯಣ, ಮುನಿರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.