ಬೆಂಗಳೂರು,ಆ,27; ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿಯಿಂದ ಮಾರಣಾಂತಿಕ ರೋಗಗಳು, ಫಲವತ್ತತೆ ಸಮಸ್ಯೆಗಳು ಕಂಡು ಬರುತ್ತಿದ್ದು, ಹಾದಿ ತಪ್ಪಿರುವ ಬದುಕನ್ನು ಸರಿದಾರಿಗೆ ತರುವುದು ಇಂದಿನ ಅಗತ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಗರದ ಎಚ್.ಎಸ್.ಆರ್. ಬಡಾವಣೆಯ ಎರಡನೇ ಸೆಕ್ಟರ್ ನಲ್ಲಿ ಆರನೇ ಓವಮ್ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ಇಂತಹ ಮೆರ್ಟನಿಟಿ ಕೇಂದ್ರಗಳು ಅಗತ್ಯವಾಗಿವೆ. ದಂಪತಿಯನ್ನು ಸಮಾಲೋಚನೆಗೆ ಒಳಪಡಿಸಿ, ಪರೀಕ್ಷೆ ನಡೆಸಿ, ಆರಾಮದಾಯಕವಾದ ಚಿಕಿತ್ಸೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಓವಮ್ ಮಹಿಳಾ ಮತ್ತು ಮಕ್ಕಳ ವಿಶೇಷ ಆಸ್ಪತ್ರೆ ಕೇಂದ್ರಗಳಿದ್ದು, ಜನರ ಅಗತ್ಯತೆಗಳಿಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞರಾದ ಡಾ. ಗೌರಿ ರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಐಟಿ – ಬಿಟಿ, ಬ್ಯಾಂಕಿಂಗ್ ಮತ್ತಿತರೆ ಉದ್ಯೋಗಿಗಳಲ್ಲಿ ಫಲವತ್ತತೆ ಸಮಸ್ಯೆಗಳು ಹೆಚ್ಚಾಗಿದ್ದು, ಧೂಮಪಾನ, ಮಧ್ಯಪಾನ ಮಾಡುವವರಲ್ಲೂ ಸಮಸ್ಯೆಗಳು ಅಧಿಕವಾಗಿ ಕಂಡು ಬರುತ್ತಿವೆ. ಇಂತಹವರಿಗೆ ಸೂಕ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಬೇಕಾಗಿದೆ. ದಂಪತಿಗಳು ಮಕ್ಕಳನ್ನು ಮಾಡಿಕೊಳ್ಳುವುದನ್ನು ತಡ ಮಾಡುತ್ತಿದ್ದು, ಇದರಿಂದ ಕ್ರೋಮೋಜೋಮ್ ಮತ್ತಿತರೆ ಸಮಸ್ಯೆಗಳು ಕಂಡು ಬರುತ್ತಿವೆ. ಈ ಎಲ್ಲದಕ್ಕೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಓವಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಆದರ್ಶ್ ಸೋಮಶೇಖರ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದ ವೈದ್ಯರಿಲ್ಲ. ಎಲ್ಲಾ ಸಮಸ್ಯೆಗಳಿಗೂ ಪರಿಣಿತರನ್ನೊಳಗೊಂಡ ವೈದ್ಯರ ತಂಡವಿದೆ. ಸಮಸ್ಯೆಗಳಿಗೆ ಸಮಗ್ರ ಮತ್ತು ರಚನಾತ್ಮಕವಾಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಭಾಗಕ್ಕೆ ತೆರಳಿ ಸಮಸ್ಯೆಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥ್ ರೆಡ್ಡಿ, ಬಿ.ಎಂ.ಆರ್.ಸಿ.ಎಲ್ ಆಯುಕ್ತರಾದ ದಿವ್ಯಶ್ರೀ ಹೊಸೂರು, ಆಸ್ಪತ್ರೆಯ ತಜ್ಞ ವೈದ್ಯರಾರ ಡಾ. ಪುನಿತ್ ರೆಡ್ಡಿ, ಡಾ. ಶರತ್ ರೆಡ್ಡಿ ಸಿಬ್ಬಂದಿ ಉಪಸ್ಥಿತರಿದ್ದರು.