ಸುದ್ದಿಮೂಲವಾರ್ತೆ
ಕೊಪ್ಪಳ,ಆ.27: ನಗರದ ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ೯೦ ನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬ್ಯಾಂಕಿನ ನೂತನ ಎಟಿಎಂ ಕಾರ್ಡ್, ಸಿಟಿಸಿ ಚೆಕ್ ಹಾಗೂ ಬ್ಯಾಂಕಿನ ನೂತನ ಲೋಗೋಗೆ ವಿದ್ಯುಕ್ತ ಚಾಲನೆ ನೀಡಿದರು.
ಅವರು ನಗರದ ಶಿವಶಾಂತ ಮಂಗಲ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಚಾಲನೆ ನೀಡಿ, ಬ್ಯಾಂಕಿಗೆ ಶುಭ ಹಾರೈಸಿದರು.
ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಜ್ಯೋತಿ ಬೆಲಗಿಸಿ, ಪುಷ್ಪ ಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ಯಾಂಕಿನ ಅಧ್ಯಕ್ಷ ರಾಜಶೇಖರಗೌಡ ಆಡೂರ್ ಮಾತನಾಡಿ, ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಕಳೆದ ಮಹಾಸಭೆಯಲ್ಲಿ ಸದಸ್ಯ ಷೇರುದಾರರುಗಳ ಅನಿಸಿಕೆ ಅಭಿಪ್ರಾಯಗಳನ್ನು ಪರಿಗಣಿಸಿ ಬ್ಯಾಂಕಿನ ಪ್ರಗತಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಅದರಲ್ಲಿ ಬ್ಯಾಂಕನ್ನು ನೆಲ ಮಹಡಿಗೆ ತರುವುದು ಎಲ್ಲಾ ರೀತಿಯ ಗ್ರಾಹಕರಿಗೆ ಅನುಕೂಲವಾಗಲು ನೆಟ್ ಬ್ಯಾಂಕಿಂಗ್ ಸೇವೆ, ಸಿಟಿಸಿ ಚೆಕ್, ಎಟಿಎಂ ಕಾರ್ಡ್ ಮತ್ತು ಬ್ಯಾಂಕನ್ನು ಗುರುತಿಸುವ ಉದ್ದೇಶದಿಂದ ನೂತನ ಲೋಗೋ ಸಿದ್ಧಪಡಿಸಿ ಅವುಗಳಿಗೆ ಚಾಲನೆ ನೀಡಲಾಗಿದೆ. ಒಂದು ತಿಂಗಳಲ್ಲಿ ಗ್ರಾಹಕರಿಗೆ ಇವುಗಳನ್ನು ಮುಟ್ಟಿಸಲಾಗುವುದು ಬ್ಯಾಂಕಿನ ಪ್ರಗತಿಗೆ ಸದಸ್ಯರ ಎಲ್ಲಾ ಅಭಿಪ್ರಾಯಗಳನ್ನು ಸದಾ ಸ್ವಾಗತಿಸಲಾಗುವುದು ಎಂದ ಅವರು, ಸದಸ್ಯರುಗಳ ಅಭಿಪ್ರಾಯದಂತೆ ಬ್ಯಾಂಕ್ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಂಕಿನ ವ್ಯಾಪ್ತಿಗೆ ಒಳಪಡುವ ಇನ್ನಿತರ ಕಾರ್ಯಗಳನ್ನು ಮಾಡುತ್ತಿದ್ದು ಭಾಗ್ಯನಗರ ಶಾಖೆಯನ್ನು ಕೂಡ ನೂತನ ನೆಲಮಹಡಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ, ಉತ್ತಮ ಸೇವೆ ನೀಡುವುದು ನಮ್ಮ ಮೊದಲ ಕರ್ತವ್ಯ ಹಾಗೂ ಆದ್ಯತೆಯಾಗಿದೆ ಎಂದರು.
ಬ್ಯಾಂಕಿನ ಪ್ರಧಾನ ಸ್ಥಾಪಕ ಪ್ರಭಾಕರ್ ಜೋಶಿ ಮಾತನಾಡಿ ಆಡಳಿತ ಮಂಡಳಿ ಸರ್ವ ಸದಸ್ಯರು, ಬ್ಯಾಂಕಿನ ಸಿಬ್ಬಂದಿಯವರು ಬ್ಯಾಂಕಿನ ಗ್ರಾಹಕರ ಸಹಕಾರದೊಂದಿಗೆ ಬ್ಯಾಂಕಿನ ಲಾಭವನ್ನು ಒಂದು ಕೋಟಿ ಹತ್ತಿರಕ್ಕೆ ತಂದು ನಿಲ್ಲಿಸಿದ್ದಾರೆ, ಬರುವ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚು ಮಾಡುವ ಮತ್ತು ಶೇರುದಾರರಿಗೆ ಸಾಧ್ಯವಾದಷ್ಟು ಲಾಭಾಂಶವನ್ನು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಶಕ್ತಿ ಮೀರಿ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಷೇರುದಾರರ ಸಲಹೆಯಂತೆ ಬಂಗಾರ ಅಡುವ ವಿಶೇಷ ಕೌಂಟರ್ ತೆರೆಯುವುದು, ಕಾನೂನು ರೀತಿಯ ಕಡಿಮೆ ಶುಲ್ಕದಲ್ಲಿ ಉಳಿದವರಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸೇವೆ ಒದಗಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬ್ಯಾಂಕನ್ನು ಉನ್ನತೀಕರಿಸುವ ಕೆಲಸ ನಿರಂತರವಾಗಿ ನಡೆದಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ಮತ್ತು ಮಾರಾಟ ಅಧಿಕಾರಿ ಮಲ್ಲಿಕಾರ್ಜುನ್ ಸಿದ್ನೇಕೊಪ್ಪ ಅವರು ಕಳೆದ ವರ್ಷದ ಮಹಾಸಭೆಯ ಠರಾವನ್ನು ಮಂಡಿಸಿ ಷೇರುದಾರರ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಅವರು ಕಳೆದ ಹತ್ತು ವರ್ಷದಲ್ಲಿ ಬ್ಯಾಂಕಿನ ಪ್ರಗತಿ ಬಹಳ ವೇಗವಾಗಿ ನಡೆಯುತ್ತಿದ್ದು ಲಾಭಾಂಶವೂ ಕೂಡ ಹೆಚ್ಚಾಗಿ. ವಸೂಲಾಗದ ಸಾಲ ಅತ್ಯಂತ ಕಡಿಮೆ ಆಗಿದ್ದು, ಠೇವಣಿ ಮತ್ತು ಸಾಲ ನೀಡುವದು ಹೆಚ್ಚಾಗುತ್ತಿದೆ, ಬ್ಯಾಂಕಿನ ಬಗ್ಗೆ ಮಾರುಕಟ್ಟೆಯಲ್ಲಿ ಉತ್ತಮ ಅಭಿಪ್ರಾಯವಿದೆ, ರಾಜ್ಯಮಟ್ಟದ ಪ್ರಶಸ್ತಿಗೆ ಬ್ಯಾಂಕಿನ ಇಬ್ಬರು ಹಾಗೂ ವಿಭಾಗಮಟ್ಟದಲ್ಲಿ ಬ್ಯಾಂಕ್ ಪ್ರಶಸ್ತಿ ಪಡೆದಿರುವದು ಸಹ ಅದಕ್ಕೆ ಸಾಕ್ಷಿ ಎಂದರು. ಬ್ಯಾಂಕಿನ ೧೦ ಉತ್ತಮ ಗ್ರಾಹಕರನ್ನು ಗುರುತಿಸಿ ಸನ್ಮಾನ ಮಾಡಲಾಯಿತು, ಅದೇ ರೀತಿ ಬ್ಯಾಂಕಲ್ಲಿ ೨೩ ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಹೇಮಣ್ಣ ಹಾದಿಮನಿ ಅವರನ್ನು ಗೌರವಿಸಲಾಯಿತು.
ಈ ವೇಳೆ ಬ್ಯಾಂಕಿನ ಷೇರುದಾರ ಮಂಜುನಾಥ ಜಿ. ಗೊಂಡಬಾಳ ಸೇರಿ ಹಲವು ಜನರು ಸಲಹೆ ಸೂಚನೆ ನೀಡಿದರು. ಬ್ಯಾಂಕಿನ ನಿವೃತ್ತ ಸಿಬ್ಬಂದಿಯವರಿಗೆ ನಿವೃತ್ತಿ ವೇತನ (ಪೆನ್ಶನ್) ನೀಡುವದು, ಹತ್ತು ವರ್ಷದ ಗುರಿ ಇಟ್ಟುಕೊಂಡು ಈಗಿರುವ ಠೇವಣಿ ಹಲವು ಪಟ್ಟು ಮಾಡುವದು ಹಾಗೂ ಹತ್ತು ಜಿಲ್ಲೆಗಳಲ್ಲಿ ಶಾಖೆ ತೆರೆಯುವದು, ಬಂಗಾರ ಅಡವು ಇಡಲು ವಿಶೇಷ ಕೌಂಟರ್ ತೆರೆದು ತುರ್ತು ಸೇವೆ ನೀಡುವದು ಸೇರಿ ಘೋಷಣೆ ಆಗಿರುವ ಯೋಜನೆಗಳನ್ನು ತುರ್ತಾಗಿ ಜಾರಿಗೆ ತಂದು ವಾರ್ಷಿಕ ಸಭೆಯ ನಡಾವಳಿ ಮತ್ತು ಪ್ರಶ್ನೋತ್ತರಗಳ ವಿವರವನ್ನು ಅಢಾವೆ ಪತ್ರಿಕೆಯಲ್ಲಿ ಮುದ್ರಿಸುವಂತೆ ಸಲಹೆ ನೀಡಿದರು. ಷೇರುದಾರರಾದ ಬಸವರಾಜ ಗಣವಾರಿ, ಶಂಕರಗೌಡ ಹಿರೇಗೌಡ್ರ, ಉಮೇಶ ಬಿ. ಚಕ್ಕಿ, ನೀಲಕಂಠಯ್ಯಸ್ವಾಮಿ ಹಿರೇಮಠ, ದ್ಯಾಮಣ್ಣ ಚಿಲವಾಡಗಿ, ಅಬ್ದುಲ್ ಕುದ್ದೂಸ್ ಸಿದ್ದಖಿ ಇತರರು ಮಾತನಾಡಿದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿದೇರ್ಶಕರುಗಳಾದ ಬಸವರಾಜ ಶಹಪೂರ, ಗವಿಸಿದ್ದಪ್ಪ ತಳಕಲ್, ವಿಶ್ವನಾಥ ಅಗಡಿ, ಶಿವರಡ್ಡಿ ಭೂಮಕ್ಕನವರ, ಶಿವಕುಮಾರ ಪಾವಲಿಶೆಟ್ಟರ್, ರಾಜೇಂದ್ರಕುಮಾರ್ ಶೆಟ್ಟರ್, ರಮೇಶ ಕವಲೂರ, ನಾಗರಾಜ ಅರಕೇರಿ, ಸುಮಂಗಲಾ ಸೋಮಲಾಪೂರ, ಸೈಯದಾ ಶೈನಾಜಬೇಗಂ, ಜಯಶ್ರೀ ಬಬಲಿ ಹಾಗೂ ವೃತ್ತಿಪರ ನಿರ್ದೇಶಕ ವಿ. ಬಿ. ಅಂಗಡಿ ಮತ್ತು ಎ.ಎಸ್. ಮಂಗಳೂರ ಜೊತೆಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಷಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಸಹಾಯಕ ವ್ಯವಸ್ಥಾಪಕಿ ವೀರಮ್ಮ ನರಗುಂದ, ಹಿರಿಯ ಸಹಾಯಕ ಐ. ಜೆ. ನದೀಮುಲ್ಲಾ, ರಾಘವೇಂದ್ರ ಜಮಖಂಡಿಕರ್, ಬ್ಯಾಂಕಿನ ಕಾನೂನು ಸಲಹೆಗಾರರಾದ ರಾಜಶೇಖರ ಗಣವಾರಿ, ರಾಕೇಶ ಪಾನಘಂಟಿ, ಅಭಿಯಂತರ ಚನ್ನಕೇಶವ ಗೋಂದಕರ್, ಶಾಸನಬದ್ಧ ಲೆಕ್ಕಪರಿಶೋಧಕ ಬಸವರಾಜ ಉಂಕಿ, ವೃತ್ತಿಪರ ನಿರ್ದೇಶಕರಾದ ವಿ.ಬಿ. ಅಂಗಡಿ ಮತ್ತು ಎ.ಎಸ್. ಮಂಗಳೂರ ಇದ್ದರು. ಪ್ರಾರ್ಥನೆ ಮತ್ತು ಸಂಗೀತ ಕಾರ್ಯಕ್ರಮವನ್ನು ಶ್ರೀ ಗುರು ಪಂಚಾಕ್ಷರ ಸಂಗೀತ ಸೇವಾ ಸಂಸ್ಥೆಯ ರಾಮಚಂದ್ರಪ್ಪ ಉಪ್ಪಾರ ಮತ್ತು ತಂಡ ನೆರವೇರಿಸಿತು. ಬ್ಯಾಂಕ್ ನಿರ್ದೇಶಕಿ ಸುಮಂಗಲಾ ಸೋಮಲಾಪೂರ ಅವರು ವಂದಿಸಿದರು.