ಸುದ್ದಿಮೂಲವಾರ್ತೆ
ಹೊಸಕೋಟೆ, ಆ.27: ಜಾನಪದ ಕಲೆ ಗ್ರಾಮೀಣ ಭಾಗದಲ್ಲಿಯೂ ಅಪರೂಪವಾಗುತ್ತಿದೆ. ಜಾನಪದ ಸಾಹಿತ್ಯದ ಮೂಲ ಸೊಗಡನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಬರುತ್ತಿದೆ ಎಂದು ಪ್ರಾಂಶುಪಾಲ ಸಿದ್ಧರಾಮಯ್ಯ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿಯ ಕೆಪಿಎಸ್ ಸ್ಕೂಲ್ ಆವರಣದಲ್ಲಿ ಶನಿವಾರ ಕರ್ನಾಟಕ ಗಡಿ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ಅಭಿನೇತ್ರಿ ಸಾಂಸ್ಕೃತಿಕ ಸಂಘ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಾನಪದ ಕಲೆ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಅದು ನಾಡಿನ ಘನತೆ ಗೌರವಗಳನ್ನು ಹೆಚ್ಚಿಸಿದೆ, ಆದರೆ ಇತ್ತೀಚೆಗೆ ಏಕ ಸಂಸ್ಕೃತಿಯ ಬಗ್ಗೆ ಚರ್ಚೆಯಾಗುತ್ತಿರುವುದು ಬಹುಜನರ ಮೇಲಿನ ದಬ್ಬಾಳಿಕೆಯಾಗುತ್ತಿದೆ. ಆಧುನಿಕ ಅಬ್ಬರದ ನಡುವೆ ಜನಪದ ಕಲೆಗಳು ಕಣ್ಮರೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮು ಮಾತನಾಡಿ, ಜಾನಪದ ರಂಗಭೂಮಿ, ಹಾಡುಗಳು ಉತ್ತಮ ಸಂದೇಶ ಬೀರುತ್ತಾ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಿವೆ. ಜಾನಪದ ಕಲೆ ಸಂಸ್ಕೃತಿ ಗಡಿಭಾಗದ ಪ್ರದೇಶಗಳಲ್ಲಿ ನಶಿಸಿ ಹೋಗದಂತೆ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗಡಿಜಿಲ್ಲೆಗಳಲ್ಲಿ ಅನೇಕ ಜನಪದ ಪ್ರತಿಭೆಗಳು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಿ, ಭಾಗವಹಿಸಿದ 20ಕ್ಕೂ ಹೆಚ್ಚು ತಂಡಗಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಎನ್, ಉಪ ಪ್ರಾಂಶುಪಾಲೆ ಶುಭ, ಉದ್ಯಮಿ ಕಲ್ಕೆರೆ ಎಂ. ಮಂದೀಪ್ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂನ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಉಪಾಧ್ಯಕ್ಷೆ ಮಜರ್ ಉನ್ನಿಸಾ ಪಾಷಾಖಾನ್, ಸದಸ್ಯರಾದ ವೀರರಾಜು, ಮಂಜುನಾಥ್ ಎನ್.ಎನ್, ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್
ಎನ್, ಮುಖ್ಯ ಶಿಕ್ಷಕ ಡಿ. ಕೃಷ್ಣಪ್ಪ, ಸಂವಾದಕಾರರಾದ ಹೇಮಲತಾ, ಲತಾ, ಶೋಭ, ಮಮತ, ಶೀಲಾವತಿ,ಶೋಭಾಗೌಡ, ಮೀನಾಕ್ಷಿ, ಸರಿತಾ, ರೇಣುಕಾ, ಮಂಜುಳಮ್ಮ, ಸವಿತ, ಸೌಮ್ಯ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.