ಸುದ್ದಿಮೂಲ ವಾರ್ತೆ,
ಹೊಸಕೋಟೆ,ಆ.28 : ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಆನಾವರಣಕ್ಕೆ ಪ್ರತಿಭಾಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸತನದ ಪ್ರೇರಕ ಶಕ್ತಿ ಮೂಡುತ್ತದೆ ಎಂದು ಶಾಸಕ ಶರತ್ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿ ಮಟ್ಟದ ಸೂಲಿಬೆಲೆ ಕ್ಲಸ್ಟರ್ ಹಾಗೂ ಬೆಂಡಿಗಾನಹಳ್ಳಿ ಕ್ಲಸ್ಟರ್ ಮಟ್ಟದ ಜಂಟಿ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ವಿದ್ಯಾರ್ಥಿಯಲ್ಲೂ ತನ್ನದೇ ಆದ ಹೊಸ ಹೊಸ ಆಲೋಚನಾ ಲಹರಿಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಅವುಗಳನ್ನು ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕು ಹಾಗೂ ವೇದಿಕೆಗಳು ನಿರ್ಮಾಣವಾಗಬೇಕು ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಪೋಷಕರು ಮಕ್ಕಳಿಗೆ ಅಸಕ್ತಿ ಇರುವ ಸಂಗೀತ, ನೃತ್ಯ ,ಕರಾಟೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಆಡಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಮನೆ ಮತ್ತು ಶಾಲೆಯಿಂದಲೂ ಆಗಬೇಕು ಎಂದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಕಾರಂಜಿಯಾಗಿ ಹೊರ ಚಿಮ್ಮಬೇಕು. ಚಿಮ್ಮಿಸುವ ಕೆಲಸ ಶಿಕ್ಷಕರಿಂದ ಸಾಧ್ಯವಾಗಬೇಕು. ಕಡು ಬಡತನದಲ್ಲಿ ಹುಟ್ಟಿದರೂ ವಿದ್ಯೆ ಎಂಬ ಆಸ್ತಿಯನ್ನು ಗಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ತಾ.ಪಂ.ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಗುತ್ತಿಗೆದಾರ ದೇವರಾಜಪ್ಪ, ದೊಡ್ಡಹರಳಗೆರೆ ಗ್ರಾ.ಪಂ.ಅಧ್ಯಕ್ಷೆ ನರಸಮ್ಮ, ಇಸಿಓ ರವಿಕುಮಾರ್, ಬಿರ್ಪಿ ನಾಗರಾಜ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಂಜುನಾಥ್, ಪ್ರೌಢಶಾಲೆ ಮುಖ್ಯಶಿಕ್ಷಕಿ ಭುವನೇಶ್ವರಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಶ್ರೀನಿವಾಸಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.