ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಆ.28: ಅಕ್ರಮ – ಸಕ್ರಮ ಕೃಷಿ ಪಂಪ್ಸೆಟ್ ಗಳಿಗೆ ಕೂಡಲೇ ವಿದ್ಯುತ್ ಪರಿವರ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಮತ್ತು ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಾಲೂಕಿನ ದಿಬ್ಬೂರಹಳ್ಳಿಯಲ್ಲಿ ರಾಜ್ಯ ಹೆದ್ದಾರಿಯನ್ನು ತಡೆದು ನಂತರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಸುಮಾರು 231 ಅಕ್ರಮ-ಸಕ್ರಮ ಕೃಷಿ ಪಂಪ್ಸೆಟ್ಟುಗಳಿಗೆ ರೈತರಿಂದ ತಲಾ 30 ಸಾವಿರ ರೂಗಳನ್ನು ಕಟ್ಟಿಸಿಕೊಂಡು ಇದುವರೆಗೆ 25 ಕೆವಿ ಟ್ರಾನ್ಸ್ ಫಾರ್ಮರ್ಸ್ ನೀಡಿಲ್ಲ ತಕ್ಷಣ ರೈತರಿಗೆ ಅಕ್ರಮ ಪಂಪ್ ಸೆಟ್ಟುಗಳನ್ನು ಸಕ್ರಮಗೊಳಿಸಬೇಕು, ಕೃಷಿ ಪಂಪ್ಸೆಟ್ಟುಗಳಿಗೆ ಲೋಡ್ ಶೆಡ್ಡಿಂಗ್ ನೆಪದಲ್ಲಿ ಪದೇಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಗೃಹಜೋತಿ ಬೆನ್ನಲ್ಲೇ ಜನರಿಗೆ ಕತ್ತಲೆ ಭಾಗ್ಯವನ್ನು ಸರ್ಕಾರ ಹಾಗೂ ಬೆಸ್ಕಾಂ ಅಧಿಕಾರಿಗಳು ಕರುಣಿಸುವ ಮುಖಾಂತರ ರೈತರು ಹಾಗೂ ವಿದ್ಯಾರ್ಥಿಗಳು ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡಲು ಮುಂದಾಗಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿಕೆ ಅರುಣ್ಕುಮಾರ್ ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಾನ್ಸ್ ಫಾರ್ಮರ್ಸ್ ಸುಟ್ಟುಹೋದ ಪಕ್ಷದಲ್ಲಿ ತಾವೇ 24 ಗಂಟೆ ಒಳಗಾಗಿ ರಿಪೇರಿ ಅಥವಾ ಹೊಸ ಟಿಸಿ ವ್ಯವಸ್ಥೆ ಮಾಡಿ ಸರಿಪಡಿಸಬೇಕಾಗಿರುತ್ತದೆ. ಅಧಿಕಾರಿಗಳನ್ನು ಕೇಳಿದರೆ ಲಂಚವಿಲ್ಲದೆ ಟಿಸಿ ಬಿಚ್ಚುವುದಿಲ್ಲ, ಸರಿಪಡಿಸುವುದಿಲ್ಲ. ರೈತರು ಲಂಚವನ್ನು ನೀಡಲು ಹಣವಿಲ್ಲದಿದ್ದಾಗ ನಿರ್ದಿಷ್ಟ ಸಮಯದಲ್ಲಿ ಟಿಸಿ ಗಳನ್ನು ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಶಂಕರನಾರಾಯಣ, ಎನ್ ಮಂಜುನಾಥ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ ವೆಂಕಟರೆಡ್ಡಿ, ಮುನಿರಾಜು, ಕೆಎಸ್ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.