ಸುದ್ದಿಮೂಲ ವಾರ್ತೆ
ಬೆಂಗಳೂರು,ಆ.29: ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಫಲ್ಯಗಳ ಕುರಿತು ಬಿಜೆಪಿ ಹೊರ ತಂದಿರುವ ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರೊಂದಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಸಂಪೂರ್ಣ ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಆರಂಭ ಮಾಡಿ ಯಾವ ರೀತಿ ದಿಕ್ಸೂಚಿ ನೀಡಬೆಕಾಗಿತ್ತು ಅದರ ಬದಲು ದಿಕ್ಕು ತಪ್ಪಿದ ಸರ್ಕಾರ ಇದಾಗಿದೆ. ಸರ್ಕಾರ ಗೊಂದಲದಲ್ಲಿ ಸಿಲುಕಿ ಮಾತಿಗೆ ತಪ್ಪಿದ ಸರ್ಕಾರ ಇದಾಗಿದೆ. ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದೆ. ನಾವು ಸರಪ್ಲಸ್ ಬಜೆಟ್ ಮಂಡನೆ ಮಾಡಿದ್ದೇವು ಇವರು ಬಂದ ಮೇಲೆ 8 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಒಟ್ಟು 45 ಸಾವಿರ ಕೋಟಿ ರೂ. ತೆರಿಗೆ ಮೂಲಕ ಸಂಗ್ರಹಿಸುವ ಅವಕಾಶ ಮಾಡಿಕೊಂಡು 12 ಸಾವಿರ ಕೋಟಿ ಡೆಫಿಸಿಟ್ ಹೆಚ್ಚಳ ಮಾಡಿಕೊಂಡಿದ್ದಾರೆ ನಾವು ಕೊವಿಡ್ ನಂತರ ಸರ್ ಪ್ಲಸ್ ಬಜೆಟ್ ಮಾಡಿದ್ದೇವು. ಇವರು ಕೊವಿಡ್ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾರಿಗೆ ನೌಕರರ ಸಂಬಳ ವಿಳಂಬವಾಗುತ್ತಿದೆ. ಇವರು ಬಂದ ಮೇಲೆ ಒಂದು ಕಿಮಿ ರಸ್ತೆಯನ್ನೂ ಮಾಡಿಲ್ಲ ಎಂದು ಹೇಳಿದರು.
ಹೆಚ್ಚಿದ ರೈತರ ಆತ್ಮಹತ್ಯೆ
ರಾಜ್ಯದಲ್ಲಿ ಬರಗಾಲ ಬಂದರೂ ರೈತರ ಕಡೆ ತಿರುಗಿ ನೋಡಿಲ್ಲ. ಎರಡು ಬಾರಿ ಬಿತ್ತನೆ ಮಾಡಿದ್ದರೂ ಬೆಳೆ ಬಾರದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ 50 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 4500 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬೇಕಿದೆ. ಸಾಲ ವಸೂಲಿ ನಿಲ್ಲಿಸಬೇಕು. ಕೃಷಿ ಇಲಾಖೆಯಲ್ಲಿ ಟ್ರಾನ್ಸ್ ಫರ್ ಸುಗ್ಗಿ ನಡೆಯುತ್ತಿದೆ. ಎಲ್ಲ ಇಲಾಖೆಗಳಲ್ಲಿ ಟ್ರಾನ್ಸ್ ಫರ್ ಸುಗ್ಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ರೈತ ವಿದ್ಯಾನಿಧಿ, ಭೂಸಿರಿ, ರೈತರಿಗೆ ವಿಮೆ ನೀಡುವ ಜೀವನ ಜ್ಯೋತಿ ಯೋಜನೆ, ರೈತ ಶಕ್ತಿ ಯೋಜನೆ ಸ್ಥಗಿತಗೊಳಿಸಿದ್ದಾರೆ. ರೈತರ ಆವರ್ತ ನಿಧಿ 100 ಕೋಟಿ ಮೀಸಲಿಟ್ಟಿದ್ದೇವು ಅದನ್ನು ನಿಲ್ಲಿಸಿದ್ದಾರೆ. ಇವರು ದಲಿತರ ಬಗ್ಗೆ ಮಾತನಾಡುತ್ತಾರೆ. 100 ಅಂಬೇಡ್ಕರ್ ಹಾಸ್ಟೇಲ್ ಮಾಡಿದ್ದೇವು, ಕನಕದಾಸ ಹಾಸ್ಟೇಲ್ ಗಳು, ಐದು ಮೆಗಾ ಹಾಸ್ಟೇಲ್ ಗಳಿಗೆ ಅನುದಾನ ನೀಡಿಲ್ಲ. ನಮ್ಮ ಸರ್ಕಾರದ ಸ್ತ್ರೀಸಾಮಾರ್ಥ್ಯ ಯೋಜನೆ ಸ್ಥಗಿತಗೊಳಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಹಗಲು ದರೋಡೆ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳ ನಡುವೆ ಭ್ರಷ್ಟಾಚಾದ ಜಗಳ ನಡೆಯುತ್ತಿದೆ. ಬೆಂಗಳೂರು ರೂರಲ್ ಎಸಿ, ಡಿಸಿ ಹುದ್ದೆಗಳಿಗೆ ಹರಾಜು ನಡೆಯುತ್ತಿದೆ. ಬೆಂಗಳೂರು ಎಸಿ ರೇಟ್ ಜಾಸ್ತಿಯಾಗಿದೆಯಂತೆ ಈಗ 13 ಕೋಟಿಗೆ ಏರಿದೆಯಂತೆ ಎಂದು ತಿಳಿಸಿದರು.
ದಮನಕಾರಿ ನೀತಿ ಅನುಕರಣೆ
ಯಾರಾದರೂ ದೂರು ಕೊಟ್ಟರೆ ಅವರ ವಿರುದ್ದ ಕ್ರಮ ಕಾಂಟ್ರಾಕ್ಟರ್ ಗಳು ರಾಜ್ಯಪಾಲರಿಗೆ ದೂರು ನೀಡಿದರೆ ಅವರಿಗೆ ನೊಟೀಸ್ ನೀಡುತ್ತಿದ್ದಾರೆ. ಶಾಸಕ ಬಿ.ಆರ್ ಪಾಟಿಲ್ ಅವರು ಫೇಕ್ ಲೆಟರ್ ಅಂತ ಹೇಳಿದರು. ಅದು ಫೆಕ್ ಹೌದೊ ಅಲ್ಲವೊ ಅನ್ನುವುದು ತನಿಖೆಯಾಗಬೇಕು. ಅದನ್ನು ಬಿಟ್ಟು ಸುದ್ದಿ ಮಾಡಿದ ಪತ್ರಕರ್ತರಿಗೆ ನೊಟೀಸ್ ನೀಡುತ್ತಿದ್ದಾರೆ. ಯಾರೇ ಏನೇ ಪೋಸ್ಟ್ ಮಾಡಿದರೆ ಅವರನ್ನು ಜೈಲಿಗೆ ಹಾಕುವ ದಮನಕಾರಿ ಧೋರಣೆ ಅನುಸರಿಸಲಾಗುತ್ತಿದೆ.
ಕ್ರೈಮ ಗಳು ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ಬಾರ್ ಗಳು ತಲೆ ಎತ್ತುತ್ತಿವೆ. ಮಂತ್ರಿಗಳಿಗೆ ಕಮಿಷನ್ ನೀಡಲು ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಪೂರ್ಣ ಸ್ಥಗಿತ ಆಗಿದೆ ಎಂದು ಹೇಳಿದರು.
ಕಾವೇರಿ ರಾಜ್ಯದ ಹಿತ ಕಾಯುವಲ್ಲಿ ವಿಫಲ
ಕಾವೇರಿ ವಿಷಯದಲ್ಲಿ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ. ರಾಜ್ಯದ ಹಿತ ಕಾಯುವಲ್ಲಿ ಸರ್ಕಾರ ವಿಫಲ ಆಗಿದೆ ಅಂತ ಸರ್ವಪಕ್ಷದ ಸಭೆಯಲ್ಲಿ ಹೇಳಿದ್ದೇನೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸೂಚನೆ ನೀಡಿರುವದನ್ನು ಪ್ರಶ್ನಿಸಲು ಇನ್ನೂ ಸುಪ್ರೀಂ ಕೋರ್ಟ್ ಗೆ ಯಾಕೆ ಹೋಗಿಲ್ಲ. ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಎರಡು ಬಾರಿ ವಿಚಾರಣೆ ನಡೆಯಿತು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದರೆ ನಮ್ಮ ರೈತರ ಪರಿಸ್ಥಿತಿ ಏನಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗುತ್ತಿದೆ. ಜಲ ವಿದ್ಯುತ್ ಸ್ಥಗಿತ ಆಗುತ್ತಿದೆ. ಕಲ್ಲಿದ್ದಲು ಖರಿದಿಗೆ ಹಣ ಇಲ್ಲ. ಜಿರೋ ಬಿಲ್ ಬದಲು ಜಿರೊ ವಿದ್ಯುತ್ ಸ್ಥಿತಿ ಬಂದಿದೆ. ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ಬಳಕೆ ಮಾಡಿದ್ದಾರೆ. ಎಸ್ಸಿಪಿ ಟಿಎಸ್ಪಿ ಕಾಯ್ದೆಯ 7ಡಿ ಯನ್ನು ತೆಗೆದು ಹಾಕುವುದಾಗಿ ಹೇಳಿದ್ದರು. ಅಧಿವೇಶನದಲ್ಲಿ ಅದನ್ನು ಯಾಕೆ ಮಂಡನೆ ಮಾಡಲಿಲ್ಲ. ಅವರಿಗೆ ಹಣ ದುರ್ಬಳಕೆ ಮಾಡಿಕೊಳ್ಳಬೆಕಿದೆ ಹೀಗಾಗಿ ಅದನ್ನು ತೆಗೆದು ಹಾಕುತ್ತಿಲ್ಲ ಎಂದರು.
ಪೊಲಿಸ್ ಸ್ಟೇಶನ್ ಗಳಲ್ಲಿ ವಸೂಲಿ ದಂಧೆ ಮುಕ್ತವಾಗಿ ನಡೆಯುತ್ತಿದೆ. ಏಜೆಂಟರನ್ನು ಇಟ್ಟುಕೊಂಡು ವಸೂಲಿ ನಡೆಸುತ್ತಿದ್ದಾರೆ. ಜಿಲ್ಲೆಗಳಲ್ಲಿ ಕಾನ್ಬಸ್ಟೇಬಲ್ ಕಿರುಕುಳತಾಳದೇ ಮೇಲಾಧಿಕಾರಿಗಳ ವಿರುದ್ಧ ನೇರವಾಗಿಯೇ ಆರೋಪ ಮಾಡಿದ್ದಾರೆ. ಇವರು ನೂರು ದಿನದಲ್ಲಿ ರಾಜ್ಯವನ್ನು ಅಧೊಗತಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಬಿಜೆಪಿ ಈ ಸರ್ಕಾರದ ವಿರುದ್ದ ಹೋರಾಟ ಆರಂಭಿಸಿದೆ. ಇವರು ಇದೇ ರೀತಿ ಮುಂದುವರೆದರೆ ರಾಜ್ಯದ ಜನರೇ ಹೋರಾಟ ಮಾಡುವ ಸಮಯ ಬರುತ್ತದೆ ಎಂದರು.
ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಲಕ್ದ್ಮೀ ಯೋಜನೆಗೆ 1 ಕೋಟಿಗೂ ಹೆಚ್ಚು ಅರ್ಜಿ ಬಂದಿವೆ ಅಂತ ಹೇಳಿದ್ದಾರೆ. ಆದರೆ, ಎಷ್ಟು ಜನರನ್ನು ಆಯ್ಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿಲ್ಲ. ಫಲಾನುಭವಿಗಳನ್ನು ಹೊರಗಿಡುವ ಪ್ರಯತ್ನ ಮಾಡಲಾಗುತ್ತಿದೆ. ಅರೆ ಬೆಂದ ಯೋಜನೆಗಳಿಗೆ ನಮ್ಮ ಬೆಂಬಲ ಇಲ್ಲ ಎಂದರು.
ಬಿಜೆಪಿ ಶಾಸಕ ಎಸ್ ಟಿ ಸೊಮಶೇಖರ್ ಗೃಹ ಲಕ್ಷ್ಮಿ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರು ಯಾಕೆ ಬೆಂಬಲ ಕೊಡುತ್ತಿದ್ದಾರೆ ಅನ್ನುವುದನ್ನು ಕೇಳುತ್ತೇನೆ ಎಂದರು.
ಸರ್ಕಾರದಲ್ಲಿ ಅಸ್ಥಿರತೆ
ಕಾಂಗ್ರೆಸ್ ನಲ್ಲಿ 135 ಶಾಸಕರಿದ್ದರೂ ಅಲ್ಲಿ ಸ್ಥಿರತೆ ಇಲ್ಲ. ಅದಕ್ಕಾಗಿ ಪ್ರತಿಪಕ್ಷದ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಯಶಸ್ವಿ ನಿರ್ವಹಣೆ
ನಾವು ಆರಂಭದಿಂದಲೂ ಎಲ್ಲರೂ ಪ್ರತಿಪಕ್ಷದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆವೆ. 66 ಶಾಸಕರೂ ಸದನದ ಒಳಗೆ ಪ್ರತಿಪಕ್ಷದ ನಾಯಕನ ಸ್ಥಾನ ನಿಭಾಯಿಸಿದ್ದೇವೆ. ಒಂದು ಪಕ್ಷವಾಗಿ ಎಲ್ಲರೂ ಸೇರಿ ಸದನದ ಹೊರಗೆ ಹೋರಾಟ ನಡೆಸುತ್ತಿದ್ದೇವೆ. ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಹಾಜರಿದ್ದರು