ಸುದ್ದಿಮೂಲ ವಾರ್ತೆ
ಮೈಸೂರು, ಆ.30: ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಫ್ಯಾಸಿಸ್ಟ್ ಸರ್ಕಾರವನ್ನು ಓಡಿಸಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹ ಲಕ್ಷ್ಮೀ ಯೋಜನೆಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ ಇರುವುದು ಅದಾನಿ, ಅಂಬಾನಿ ಅಂತಹ ಶ್ರೀಮಂತರ ಪರ ಇದೆಯೋ ಹೊರತು ಬಡವರ ಪರ ಅಲ್ಲ ಎಂದು ಟೀಕಿಸಿದರು.
ಮೋದಿ ಅಂದ್ರೆ ಕೇಸ್:
ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ. ಮೋದಿ ಎಂದಿದಕ್ಕೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದರು. ಆದರೆ ರಾಹುಲ್ ಯಾವುದಕ್ಕೂ ಹೆದರುವುದಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಪಾದಯಾತ್ರೆ ಮಾಡಿ ರಾಹುಲ್ ಗಾಂಧಿ ಜನರ ಮಾತು ಆಲಿಸಿದ್ದಾರೆ ಎಂದು ಹೇಳಿದರು.
ಕಳೆದ ಐವತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಏನು ಎಂದು ಪದೇ ಪದೇ ಟೀಕಿಸುತ್ತಿದ್ದ ಬಿಜೆಪಿಗೆ ತಿರುಗೇಟು ನೀಡಿದ ಅವರು, 50 ವರ್ಷ ಕಾಂಗ್ರೆಸ್ ಸಾಧನೆಯ ರಿಪೋರ್ಟ್ ಕಾರ್ಡ್ ಇದೆ. ನಮ್ಮ ಬಳಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬ ರಿಪೋರ್ಟ್ ಕಾರ್ಡ್ ಇದೆ. ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮಾಡಿದ ಎಲ್ಲಾ ಕಾರ್ಯಗಳ ರಿಪೋರ್ಟ್ ನಮ್ಮ ಬಳಿ ಇದೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ದೇಶದಲ್ಲಿ ವಿಮಾನ ನಿಲ್ದಾಣ, ಅನೇಕ ಸಂಸ್ಥೆಗಳನ್ನು ಮಾಡಿದೆ. ನಾವು ಮಾಡಿದ ಕೆಲಸಗಳಲ್ಲಿ ಹುಡುಕಾಡಿ ಸುಣ್ಣ ಬಣ್ಣ ಬಳಿದು ತಮ್ಮದೆನ್ನುತ್ತಾರೆ. 1947 ರಿಂದ 2014 ರವರೆಗೆ ಕಾಂಗ್ರೆಸ್ ಅಭಿವೃದ್ಧಿ ಮಾಡಿದೆ ಶೇ. 14 ಇದ್ದ ಶಿಕ್ಷಿತರ ಸಂಖ್ಯೆ ಶೆ. 74 ಆಗಿದೆ. ನಮ್ಮ ಸರ್ಕಾರದ ಸಮಯದಲ್ಲಿ ಶಿಕ್ಷಿತರನ್ನಾಗಿ ಮಾಡಲಾಗಿದೆ. ಎಸ್ಸಿ , ಎಸ್ಟಿಗಳ ಶಿಕ್ಷಣ ಕೇವಲ ಶೇ. 7 ಇತ್ತು. ನಾವು ಶೇ.60 ಮಾಡಿದ್ದೇವೆ. 1947ರ ಹಿಂದೆ 2 ಲಕ್ಷ ಪ್ರಾಥಮಿಕ ಶಾಲೆಗಳಿದ್ದವು. ಈಗ 8 ಲಕ್ಷ ಇದೆ. ನರೇಗಾಯೋಜನೆ ನಾವು ತಂದಿದ್ದು, ಸೋನಿಯಾ ಗಾಂಧಿಯವರು ಫುಡ್ ಸೆಕ್ಯೂರಿಟಿ ಆ್ಯಕ್ಟ್ ತಂದರು. ಅದಕ್ಕೆ ಉಚಿತ ಅನ್ನ ಭಾಗ್ಯವೂ ನಾವು ತಂದದ್ದು. ಬಡವರಿಗಾಗಿ ನಾವು ಯೋಜನೆಗಳನ್ನು ಮಾಡಲಾಗಿದೆ ಎಂದು ಪ್ರತಿಪಾದನೆ ಮಾಡಿದರು.
ನಮ್ಮ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ4 ಗ್ಯಾರಂಟಿ ಘೋಷಣೆಯಾಗಿದೆ. ಒಂದು ಮಾತ್ರ ಬಾಕಿ ಇದೆ. ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂತಹ ಗ್ಯಾರಂಟಿಗಳಿವು. ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಾಗ, ಕೇಂದ್ರ ನಾಯಕರು ಟೀಕೆ ಮಾಡಿದರು. ಇದರಿಂದ ಆರ್ಥಿಕತೆ ಕುಸಿಯುತ್ತೆ. ಬೋಗಸ್ ಎಂದಿದ್ದರು. ಆದರೆ ನಾವು ಇದನ್ನು ಮಾಡಿ ತೊರಿಸಿದ್ದೇವೆ ಎಂದು ಟಾಂಗ್ನೀಡಿದರು.