ಸುದ್ದಿಮೂಲ ವಾರ್ತೆ
ಮೈಸೂರು, ಆ.30:ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ರೈತರು ಕೆಆರ್ಎಸ್ ಬಳಿ ಬುಧವಾರದಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸಲಿದ್ದಾರೆ.
ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಸಂಕಷ್ಟ ಸೂತ್ರ ಅನುಸರಿಸುತ್ತಿಲ್ಲ. ಸಾಕಷ್ಟು ಮಳೆಯಾಗದಿದ್ದರೂ, ಅಣೆಕಟ್ಟೆ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸಿರುವುದು ಯಾವ ನ್ಯಾಯ ಎಂದು ದರ್ಶನ್ ಪುಟ್ಟಣ್ಣಯ್ಯ ಪ್ರಶ್ನಿಸಿದರು.
ರಾಜ್ಯ ಸರ್ಕಾರ ರಾಜ್ಯದ ಹಿತ ಕಾಪಾಡಬೇಕು. ತಮಿಳುನಾಡು ಹಾಗೂ ಪ್ರಾಧಿಕಾರದ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು. ಮೊದಲು ನಮ್ಮ ರಾಜ್ಯದ ರೈತರ ಹಿತ ಮುಖ್ಯ. ಕೂಡಲೇ ನೀರನ್ನು ನಿಲ್ಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.