ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.30: ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕ ಇರುವುದನ್ನು ಚಂದ್ರಯಾನ-3ರ ರೋವರ್ ಪ್ರಜ್ಞಾನ್ ಪತ್ತೆ ಹಚ್ಚಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಹೇಳಿದೆ.
ಇದರ ಜತೆಗೆ ಅಲ್ಯುಮಿನಿಯಂ, ಕ್ಯಾಲ್ಷಿಯಂ, ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಧಾತುಗಳು ಕೂಡ ಪತ್ತೆಯಾಗಿವೆ. ಪ್ರಜ್ಞಾನ್ನಲ್ಲಿರುವ ಲಿಬ್ಸ್ ಉಪಕರಣವು ಈ ಧಾತುಗಳನ್ನು ಪತ್ತೆ ಹಚ್ಚಿದೆ. ಜಲಜನಕ ಧಾತುವಿನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಇಸ್ರೊ ತಿಳಿಸಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿದು ಇಂದಿಗೆ ಒಂದು ವಾರ ಕಳಿದಿದೆ. ಕಳೆದ ಬುಧವಾರ ಸಂಜೆ ಚಂದ್ರಯಾನ್-3ರ ಪ್ರಜ್ಞಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿತ್ತು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿತ್ತು.