ಸುದ್ದಿಮೂಲ ವಾರ್ತೆ
ಕೊಪ್ಪಳ,ಆ.31:ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಜಿ.ಎನ್.ಪಾಟೀಲ್ರವರು ಇಂದು ಗುರುವಾರದಂದು ಬೆಳಿಗ್ಗೆ 6 ಕ್ಕೆ ನಿಧನರಾಗಿದ್ದಾರೆ. ಪ್ರೊ.ಜಿ.ಎನ್.ಪಾಟೀಲ್ರು ಸುಮಾರು ೨೫ ವರ್ಷಗಳ ಕಾಲ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿ ೨೦೦೭ಕ್ಕೆ ನಿವೃತ್ತರಾಗಿದ್ದರು.
ನನಗೆ ಸಸ್ಯಗಳೇ ಮಾರ್ಗದರ್ಶಿಗಳು,
ತಮ್ಮ ವೃತ್ತಿಯುದ್ಧಕ್ಕೂ ನಂಬಿದ ಸಸ್ಯಶಾಸ್ತ್ರದಲ್ಲಿ ವಿಶೇಷ ಅಧ್ಯಯನಗೈದ ಒಬ್ಬ ವಿಜ್ಞಾನ ವಿಭಾಗದ ಅಧ್ಯಾಪಕರ ತಪಸ್ಸಿನ ಕೇಂದ್ರವೆಂದರೆ ಪ್ರಯೋಗಾಲಯ. ಅವರು ತಮ್ಮ ಸೇವಾಧಿಯಲ್ಲಿ ಹೆಚ್ಚು ಕಳೆದಿದ್ದು ಪ್ರಯೋಗಾಲಯಗಳಲ್ಲಿ. ಎಂದೂ ಯಾರ ಬಗ್ಗೆಯೂ ಕೆಟ್ಟದರ ಬಗ್ಗೆ ಮಾತನಾಡದೆ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುತ್ತಾ, ಕಿರಿಯ ಪ್ರಾಧ್ಯಾಪಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ, ತಾವಾಯಿತು ತಮ್ಮ ಕೆಲಸವಾಯಿತು ಎಂದು ಜೀವನದ್ದುದ್ದಕ್ಕೂ ವಿದ್ಯಾರ್ಥಿಗಳಿಗೆ ಆಸಕ್ತಿಯಿಂದ ಉಪನ್ಯಾಸಗೈದರು.
ಇಂಥವರ ನಿಧನದಿಂದ ಮಹಾವಿದ್ಯಾಲಯದ ಹಳೆಯ ಸಂಪರ್ಕದ ಸೇತುವೆಯೊಂದು ಕಳಚಿದಂತಾಯಿತು.
ಅವರ ನಿಧನಕ್ಕೆ ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸಮಸ್ತ ವಿಜ್ಞಾನ ವಿಭಾಗದ ವಿದ್ಯಾರ್ಥಿ ಬಳಗ ಮಹಾವಿದ್ಯಾಲಯದ ಕಾರ್ಯದರ್ಶಿ, ಆಡಳಿತ ಅಧಿಕಾರಿ, ಪದವಿ ಮತ್ತು ಪದವಿ ಪೂರ್ವ ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ಸಕಲ ಸಿಬ್ಬಂದಿಯ ವರ್ಗವು ಕೂಡ ಪಾಟೀಲರ ನಿಧನದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.