ಸುದ್ದಿಮೂಲ ವಾರ್ತೆ
ಕೊಪ್ಪಳ ಆ 31:ಕಳೆದ ಒಂದುವರೆ ವರ್ಷದ ಹಿಂದೆ ಆರಂಭವಾಗಿದ್ದ ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ರೈಲ್ವೆ ಗೇಟು ಕಾಮಗಾರಿಯು ಸ್ಥಳೀಯ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಆದರೆ ಈಗ ಕೇಂದ್ರ ಸರಕಾರ ಹೆಚ್ಚುವರಿಯಾಗಿ 13.78.ಕೋಟಿ ರೂಪಾಯಿ ಮಂಜೂರು ಮಾಡಿದ್ದರಿಂದ ಸೇತುವೆ ಕಾಮಗಾರಿಗೆ ಹಿಡಿದಿದ್ದ ಗ್ರಹಣ ನಿವಾರಣೆಯಾದಂತಾಗಿದೆ.
ಕೊಪ್ಪಳದ ಗವಿಮಠದಿಂದ ಬಸವೇಶ್ವರ ವೃತ್ತದ ಮೂಲಕ ಕುಷ್ಟಗಿಗೆ ಹೋಗುವ ರೈಲ್ವೆ ಲೆವೆಲ್ ಕ್ರಾಸ್ಸಿಂಗ್ ಸಂಖ್ಯೆ 66 ಕ್ಕೆ ಮೇಲ್ಸೆತುವೆ ಕಾಮಗಾರಿಗಾಗಿ ಒಟ್ಟು 30.50 ಕೋಟಿ ರೂಪಾಯಿ ಮಂಜೂರಾಗಿ ಕಾಮಗಾರಿ ನಡೆಯುತ್ತಿತ್ತು. ಆದರೆ ಇದರಲ್ಲಿ ರಸ್ತೆಯ ಮಧ್ಯೆದಲ್ಲಿ ಗೋಡೆ ಬರುತ್ತಿರುವದರಿಂದ ಇಲ್ಲಿಯ ವ್ಯಾಪಾರ ವಹುವಾಟಿಗೆ ತೊಂದರೆಯಾಗುತ್ತಿದೆ. ಜನರ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸ್ಥಳೀಯರು ಕಾಮಗಾರಿ ಗೆ ವಿರೋಧ ವ್ಯಕ್ತಪಡಿಸಿದ್ದರು.
ಈ ಮಧ್ಯೆ ಸೇತುವೆ ಕಾಮಗಾರಿ ರಾಜ್ಯ ಸರಕಾರ 14 ಕೋಟಿ ಹಾಗು ಕೇಂದ್ರ ಸರಕಾರ 16.50 ಕೋಟಿ ರೂಪಾಯಿ ನೀಡಿತ್ತು. ಹೆಚ್ಚುವರಿ ಹಣ ನೀಡಲು ರಾಜ್ಯ ಸರಕಾರ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ಕೇಂದ್ರದ ರೈಲ್ವೆ ಸಚಿವರನ್ನು ಭೇಟಿ ಮಾಡಿ ಹೆಚ್ಚುವರಿ ಅನುದಾನ ನೀಡಲು ಒತ್ತಾಯಿಸಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಹಾಗು ರೈಲ್ವೆ ಮಂಡಳಿಯವರು ಹೆಚ್ಚುವರಿಯಾಗಿ 13.78 ಕೋಟಿ ರೂಪಾಯಿ ಮಂಜೂರಾತಿ ನೀಡಿದೆ. ಈ ಹಣದಲ್ಲಿ ಸೇತುವೆಗೆ ಕಂಬಗಳನ್ನು ಹಾಕಲಾಗುವುದು.
ಈಗಿರುವ ಗುತ್ತಿಗೆದಾರರೇ ಬದಲಾದ ರೈಲ್ವೆ ಸೇತುವೆ ಕಾಮಗಾರಿಯನ್ನು ಮಾಡಬೇಕಾಗಿದ್ದು ಈ ವರ್ಷದ ಅಂತ್ಯಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದೆ.
ಕೊಪ್ಪಳದ ಕುಷ್ಟಗಿ ರೈಲ್ವೆ ಗೇಟ್ ಕಾಮಗಾರಿ ನೆನೆಗುದಿಗೆ ಬೀಳುತ್ತದೆ ಎಂಬ ಆತಂಕ ಜನರಲ್ಲಿತ್ತು. ಆದರೆ ಈಗ ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಮುಗಿಸುತ್ತಿರುವದಕ್ಕೆ ಜನತೆ ನಿರಾಳರಾಗಿದ್ದಾರೆ.