ಸುದ್ದಿಮೂಲ ವಾರ್ತೆ
ಆನೇಕಲ್, ಸೆ.1: ಲೋಕಾಯುಕ್ತ ಹೆಸರು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಎಚ್ಚರಿಕೆ ನೀಡಿದರು.
ಆನೇಕಲ್ ತಾಲ್ಲೂಕಿನ ಅಲಯನ್ಸ್ ಯೂನಿವರ್ಸಿಟಿಯಲ್ಲಿ ಆಯೋಜನೆ ಮಾಡಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ನಕಲಿ ಲೋಕಾಯುಕ್ತ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಯಾರು ಯಾರು ಇದ್ದಾರೋ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಈ ರೀತಿ ಮಾಡಿದರೆ ಅವರ ಮೇಲೆ ಲೋಕಾಯುಕ್ತ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ವ್ಯಕ್ತಿಗಳು ಈ ರೀತಿಯ ಕೃತ್ಯ ಮಾಡಿದರೆ ಪೊಲೀಸರು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನರಿಗೆ ಮೋಸ ಮಾಡಿದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಲೋಕಾಯುಕ್ತಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡರೆ ಅಂತವರ ವಿರುದ್ಧ ದೂರು ನೀಡಿ ಎಂದು ಸಲಹೆ ಮಾಡಿದರು.