ಸುದ್ದಿಮೂಲ ವಾರ್ತೆ
ಮೈಸೂರು. ಸೆ.2 : ಕಾಡಿನಿಂದ ಮೈಸೂರಿಗೆ ಆಗಮಿಸಿರುವ ಅಭಿಮನ್ಯು ಪಡೆ ಇಲ್ಲಿನ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟು ವಿಶ್ರಾಂತಿ ಪಡೆಯುತ್ತಿವೆ. ಗಜಪಡೆಯಲ್ಲಿ ಕಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ, ಅರ್ಜುನ ಆನೆಗಳಿದ್ದು, ಮಾವುತರು, ಶನಿವಾರ ಬೆಳಗ್ಗೆಯಿಂದಲೇ ಅಭಿಮನ್ಯು ಪಡೆಗೆ ಸ್ನಾನವನ್ನು ಮಾವುತರು, ಕಾವಾಡಿಗರು ಮಾಡಿಸಿದರು.
4 ದಿನಗಳವರೆಗೆ ಅರಣ್ಯ ಭವನದಲ್ಲೇ ದಸರಾ ಗಜಪಡೆಗಳು ವಿಶ್ರಾಂತಿ ಪಡೆಯಲಿದ್ದು, ಸೆ .5 ರಂದು ಅರಣ್ಯ ಭವನದಿಂದ ಮೈಸೂರು ಅರಮನೆಗೆ ಪ್ರವೇಶ ಕೊಡಲಿವೆ. ದಸರಾ ಮುಗಿಯುವರೆಗೂ ಅರಮನೆಯಲ್ಲೇ ಆನೆಗಳು ವಾಸ್ತವ್ಯ ಹೂಡಲಿವೆ. ಸೆ.5ಕ್ಕೆ ಅರಮನೆ ಅವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಂತರ ತಾಲೀಮಿನಲ್ಲಿ ತೊಡಗುತ್ತವೆ. ಅದೇ ರೀತಿ ಎರಡನೇ ಹಂತದ ಆನೆಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಡಿಸಿಎಫ್ ತಿಳಿಸಿದ್ದಾರೆ.
ದಸರಾ ಗಜಪಡೆಗೆ ಅರಮನೆಯಲ್ಲಿ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಿದ ನಂತರ ಆರಮನೆ ಆವರಣ ಮತ್ತಷ್ಟು ಕಳೆಗಟ್ಟಲಿದೆ. ಬಳಿಕ ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿದ್ದು, ಈ ವೇಳೆ ದಸರಾ ಆನೆಗಳಿಗೆ ಪೊಲೀಸ್ ಭದ್ರತೆ ನೀಡಲಾಗುತ್ತದೆ.
ಅರಣ್ಯ ಭವನದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರತಿಯೊಬ್ಬರನ್ನೂ ವಿಚಾರಿಸಿದ ನಂತರವಷ್ಟೇ ಒಳಗೆ ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು, ಕಾವಾಡಿಗರು ಹಾಗೂ ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಯೊಂದು ಆನೆಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಲಾಗುತ್ತಿದೆ, ದೂರ ದೂರದಲ್ಲಿ ಆನೆಗಳನ್ನು ಇರಿಸಲಾಗಿದೆ. ಪ್ರತಿ ಬಾರಿಯೂ ದಸರಾ ಆನೆಗಳು ಆಗಮಿಸಿದ ಸಂದರ್ಭ ಅವುಗಳ ಬಳಿ ನಿಂತು ಪೋಟೋ ತೆಗೆ ಸಿಕೊಳ್ಳಲು ಜನರು ಮುಗಿಬೀಳುತ್ತಾರೆ.
ಈ ಬಾರಿಯೂ ಅಂಬಾರಿಯನ್ನು ಆಪರೇಷನ್ ಹಿರೋ ಖ್ಯಾತಿಯ ಹುಲಿ ಸೆರೆಯಲ್ಲಿ ನಿಷ್ಣಾತನಾಗಿರುವ 58ವರ್ಷದ ಅಭಿಮನ್ಯು ಹೊರುತ್ತಿದ್ದು, ಅದರೊಂದಿಗೆ ಗಜಪಡೆಯ ಹಿರಿಯ 63 ವರ್ಷದ ಅರ್ಜುನ, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ, ಕೊಡಗಿನ ಮಡಿಕೇರಿ ವಿಭಾಗದ ದುಬಾರೆ ಶಿಬಿರದ ಧನಂಜಯ, ಗೋಪಿ, ಹೊಸ ಆನೆ ಕಂಜನ್ ಹಾಗೂ ಹೆಣ್ಣಾನೆ ವಿಜಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುತ್ತವೆ.