ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.2: ಯಶಸ್ಸು ಮತ್ತು ವೈಫಲ್ಯಕ್ಕೆ ಶಿಕ್ಷಕರೇ ಜವಾಬ್ದಾರರೇ ಹೊರತು ಬೇರೆಯವರಲ್ಲ. ನಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅಥವಾ ನಮ್ಮ ಬೆಳವಣಿಗೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿ ಶಿಕ್ಷಕ ವೃತ್ತಿಯಿಂದ ಮಾತ್ರ ಸಾಧ್ಯ ಎಂದು ಜಿಪಂನ ಮಾಜಿ ಸದಸ್ಯ ಕಲ್ಲಪ್ಪ ತಿಳಿಸಿದರು.
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಶಿವನಾಪುರ ಗ್ರಾಪಂ. ವ್ಯಾಪ್ತಿಯ ಕೊರಡಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಕುರಿತು ಮಾತನಾಡಿದರು.
ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕರ್ತವ್ಯ ನಿಷ್ಠೆ ಹಾಗೂ ಸಮಯ ಪರಿಪಾಲನೆ ಮುಖ್ಯ.ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನದ ಗಂಗೆ ಹರಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರಜ್ಞಾವಂತರಾಗಿ ಬೆಳೆಸುವಲ್ಲಿ ಶಿಕ್ಷಕರು ಸಾಕಷ್ಟು ಶ್ರಮಿಸುತ್ತಾರೆ. ಇತರೆ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಸಮಾಜದಲ್ಲಿ ಅತ್ಯಂತ ಪವಿತ್ರವಾದುದು. ಅದನ್ನು ಅರಿತು ಕಾರ್ಯನಿರ್ವಹಿಸಬೇಕಿದೆ.
ಮುಖ್ಯ ಶಿಕ್ಷಕ ಸಿದ್ದಪ್ಪ ಸದಾ ಹಸನ್ಮುಖಿ ಎಲ್ಲರ ಜೊತೆಯಲ್ಲಿಯೂ ಉತ್ತಮ ಭಾಂದವ್ಯ ಹೊಂದಿದ್ದರು. ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ತಮ್ಮ 27 ವರ್ಷಗಳ ಸುದೀರ್ಘ ಸೇವಾವಧಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಸೇವಾನಿಷ್ಠೆ ಎಲ್ಲಾ ಶಿಕ್ಷಕರಿಗೂ ಮಾರ್ಗದರ್ಶನವಾಗಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಸಿದ್ದಪ್ಪ ಮಾತನಾಡಿ, ನನ್ನ ಗುರಿ ವಿದ್ಯಾರ್ಥಿಗಳನ್ನು ಒಳ್ಳೆಯ ವ್ಯಕ್ತಿಗಳಾನ್ನಾಗಿ ಮಾಡುವುದಾಗಿತ್ತು. ನನ್ನ ವೃತ್ತಿಯಲ್ಲಿ ಬಹು ಮುಖ್ಯ ತಿರುವು ನೀಡಿದ್ದು, ವಿದ್ಯಾರ್ಥಿಗಳ ಜೊತೆಯಲ್ಲಿ ಕಲಿಯಬೇಕಾಗಿರುವುದು ಸಾಕಷ್ಟಿದೆ.
ವೃತ್ತಿಯಿಂದ ನಿವೃತ್ತಿಯಾದರೂ ಜ್ಞಾನ ದಾಸೋಹ ಮಾತ್ರ ನಿರಂತರವಾಗಿರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸಿದ್ದಪ್ಪ ಹಾಗೂ 14 ವರ್ಷ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಲಕ್ಷ್ಮಿಕಾಂಗ್ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂನ ಸದಸ್ಯರಾದ ನಂದಿನಿ ಚನ್ನಕೇಶವ, ಶ್ರೀನಾಥ್, ಮಾಜಿ ಸದಸ್ಯ ಮುನಿನಾಗಪ್ಪ, ಎಂಪಿಸಿಎಸ್ ನಿರ್ದೇಶಕ ಮುನಿಯಪ್ಪ, ಮುಖಂಡರಾದ ನಾಗರಾಜಪ್ಪ,ಮುನಿರಾಜು, ರಾಮಚಂದ್ರ, ಮುನೇಗೌಡ, ಶ್ರೀನಿವಾಸ್, ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.