ಸುದ್ದಿಮೂಲ ವಾರ್ತೆ
ಯಾದಗಿರಿ,ಸೆ.4: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ವಿವಿಧ ರೀತಿಯ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳು ಮುಂದೆ ಬಂದಲ್ಲಿ, ಉದ್ಯೋಗ ಸೃಷ್ಟಿಗೆ ನೆರವಾಗುವ ಜೊತೆಗೆ ಈ ಭಾಗದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರ ಅಭಿಪ್ರಾಯ ಪಟ್ಟಿದ್ದಾರೆ.
ಯಾದಗಿರಿ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಿಡ್ಬಿ ಹಾಗೂ ಕಾಸಿಯಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ *ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು* ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲ ರೀತಿಯ ಕೈಗಾರಿಕೆಗಳ ಸ್ಥಾಪನೆಯ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕೈಗಾರಿಕೋದ್ಯಮಿಗಳು ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆ ಗಳ ಸ್ಥಾಪನೆ ಗೆ ಮುಂದೆ ಬರುವಂತೆ ಅವರು ಕರೆ ನೀಡಿದರು.
ರಾಷ್ಟ್ರ ಹಾಗೂ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ನೆರವು ಒದಗಿಸಲಾಗುತ್ತಿದೆ. ಅದರಂತೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ಗೆಳಿಗೂ ಹಣಕಾಸಿನ ಮತ್ತು ಇತರೆ ಕೊರತೆ ಇರುವುದರಿಂದ ಹಂತ ಹಂತವಾಗಿ ಇಂತಹ ಕೈಗಾರಿಕೆಗಳನ್ನು ಸ್ಥಾಪಿಸಿ ನಿಗದಿತ ಗುರಿ ತಲುಪಬೇಕು. ಬ್ಯಾಂಕ್ ಗಳೂ ಕೂಡ ಸಣ್ಣ ಕೈಗಾರಿಕೋದ್ಯಮಿಗಳಿಗೆ ವಿಳಂಬ ಧೋರಣೆ ಅನುಸರಿಸದೆ, ಆದ್ಯತೆ ಮೇಲೆ ಅವರಿಗೆ ಹಣಕಾಸಿನ ನೆರವು ಒದಗಿಸಲು ಮುಂದಾಗಬೇಕು.
ಇದರಿಂದ ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆ ಗಳು ಸ್ಥಾಪನೆಯಾಗಿ, ಉದ್ಯೋಗ ಸೃಜನೆ ಹಾಗೂ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಲಸೆ ಹೋಗುವ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು ಎಂದ ಅವರು ಸಣ್ಣ ಕೈಗಾರಿಕೆಗಳಿಗೆ ಸ್ಥಾಪನೆಗೆ ಪಡೆದಿರುವಂತಹ ನಿವೇಶನಗಳು ಮೂಲ ಉದ್ದೇಶಕ್ಕೆ ಮಾತ್ರ ಬಳಕೆಯಾಗಬೇಕು. ಇದನ್ನು ಹೊರತು ರಿಯಲ್ ಎಸ್ಟೇಟ್ ವ್ಯವಹಾರ ಆಗಬಾರದು ಎಂದು ಅಭಿಪ್ರಾಯಪಟ್ಟ ಅವರು, ಮೂಲ ಉದ್ದೇಶದಿಂದ ಆರಂಭಗೊಳ್ಳದೆ ಇರುವಂತಹ ಕೈಗಾರಿಕೆ ಗಳು ಮುಚ್ಚಿ ಹೋದಲ್ಲಿ ಉದ್ಯೋಗ ಕ್ಕೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಹೆಚ್ಚು ಹೆಚ್ಚು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕೋದ್ಯಮಿಗಳು ಮುತುವರ್ಜಿ ವಹಿಸುವಂತೆ ಅವರು ಕರೆ ನೀಡಿದರು.
ಯಾದಗಿರಿಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಗಳ ಸವಲತ್ತುಗಳು ಮತ್ತು ಹಣಕಾಸಿನ ನೆರವು ಕುರಿತು ಕಾಸಿಯಾ, ಸಿಡ್ಬಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳು ಮುಂದೆ ಬಂದಿರುವುದು ಈ ಭಾಗದ ಕೈಗಾರಿಕೋದ್ಯಮಿಗಳಿಗೆ ಹಾಗೂ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಉದ್ಯಮಗಳ ಸ್ಥಾಪನೆಗೆ ಹಣಕಾಸಿನ ನೆರವು, ಸಹಾಯಧನ, ಕೈಗಾರಿಕೆ ಅಭಿವೃದ್ಧಿ ಗೆ ಹಾಗೂ ಮಾರುಕಟ್ಟೆಗಳ ವ್ಯವಸ್ಥೆ ಕುರಿತಂತೆ ಅರಿವು ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಸರ್ಕಾರವು ಕೂಡ ಹಲವು ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದ್ದು, ಬ್ಯಾಂಕ್ ಗಳು ಕೂಡ ಆದ್ಯತೆಯ ಮೇಲೆ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ನೆರವು ನೀಡಿದಲ್ಲಿ ಹೆಚ್ಚು ಸಹಕಾರಿಯಾಗಲಿದೆ.
ಈ ಭಾಗದಲ್ಲಿ ಹತ್ತಿ, ಭತ್ತ, ಮೆಣಸಿನಕಾಯಿ ಮತ್ತು ಅಡುಗೆ ಎಣ್ಣೆ ಕಾಳುಗಳ ಬಿತ್ತನೆ ಹಾಗೂ ವಿವಿಧ ಕೃಷಿ ಬೆಳೆ ಇದೆ. ಕೈಗಾರಿಕೋದ್ಯಮಿಗಳೂ ಕೂಡ ಬೇರೆ ಬೇರೆ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀಮತಿ ರೇಖಾ ಮ್ಯಾಗೇರಿ ಅವರು, ಈಗಾಗಲೆ ಕೈಗಾರಿಕಾ ಪ್ರದೇಶ ಕಡೆಚೂರು ಭಾಗದಲ್ಲಿ ಮೊದಲ ಹಂತದಲ್ಲಿ 65 ಫಾರ್ಮಾ ಕೈಗಾರಿಕೆಗಳು ಬರುತ್ತಿವೆ. 35 ಸ್ಥಾಪನೆಯಾಗಿದ್ದು, 8 ಕಾರ್ಯಾರಂಭಗೊಂಡಿವೆ. ಅದರಂತೆ ಮುಂಡರಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿದೆ. ಸದ್ಯ ಅತಿ ಮುಖ್ಯವಾಗಿ “ಆಶನಾಳ ಪ್ರದೇಶ” ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲವಾಗುವದರಿಂದ ಈ ಪ್ರದೇಶ ಮೀಸಲಿಡಲು ಮಾನ್ಯ ಸಚಿವರಲ್ಲಿ ಕೋರಿದರು.
ಅದರಂತೆ ಕೈಗಾರಿಕಾ ನೀತಿ 2025 ಅಡಿಯಲ್ಲಿ ಆಟೋಮೊಬೈಲ್ ಘಟಕ ಸೇರ್ಪಡಿಸುವ ಅವಶ್ಯಕತೆ ಇದೆ. ಕೈಗಾರಿಕೆ ಇಲಾಖೆಯಿಂದ ಈ ನೀತಿಯಡಿ ಅತಿ ಸಣ್ಣ ಕೈಗಾರಿಕೆ ಗಳ ಸ್ಥಾಪನೆಗೆ ಸಹಾಯಧನ ಸೌಲಭ್ಯ ಸಹ ನೀಡುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಾದಗಿರಿ ಶಾಸಕ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು, ಸಣ್ಣ ಕೈಗಾರಿಕೆ ಗಳ ಉತ್ತೇಜನಕ್ಕೆ ಬ್ಯಾಂಕ್ ಗಳು ಆದ್ಯತೆಯ ಮೇಲೆ ಹಣಕಾಸಿನ ನೆರವು ನೀಡಬೇಕು. ಸರ್ಕಾರ ಕೈಗಾರಿಕೆಯ ಸಬಲೀಕರಣ, ಕೈಗಾರಿಕಾ ಗ್ರಾಹಕರ ನೆಲೆ ವಿಸ್ತರಣೆ, ಕೈಗಾರಿಕೆಗಳಿಗೆ ರಿಯಾಯಿತಿ ಸೌಲಭ್ಯ ನೀಡುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಆರ್ಥಿಕ ಸಾರಕ್ಷರತೆಗೆ ಕಾಸಿಯಾ ಹಾಗೂ ಸಂಬಂಧಿಸಿದ ಇಲಾಖೆಗಳು ಮಹತ್ವ ನೀಡುತ್ತಿರುವುದು ಪ್ರಶಂಸಾರ್ಹ ಕಾರ್ಯವಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್.ಬಿ,ಕಾಸಿಯಾದ ಅಧ್ಯಕ್ಷರಾದ ಸಿಎ ಶಶಿಧರ್ ಶೆಟ್ಟಿ, ಬೆಂಗಳೂರು ಪ್ರಾದೇಶಿಕ ಕಚೇರಿ ಸಿಡ್ಬಿ ಯ ಉಪ ಪ್ರಧಾನ ವ್ಯವಸ್ಥಾಪಕರಾದ ಬಿ.ಉಲಗಿಯನ್, ಯಾದಗಿರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷರಾದ ದಿನೇಶ್ ಕುಮಾರ ಜೈನ್, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ, ನಗರ ಜಂಟಿ ಕಾರ್ಯದರ್ಶಿ ಶ್ರೇಯಾನ್ಸ್ ಕುಮಾರ ಜೈನ್, ಕಾಸಿಯಾದ ಜಿಎಸ್ಟಿ ಪ್ಯಾನಲ್ ಚೇರ್ಮನ್ ಉಮಾಶಂಕರ್, ಜೆ.ಸಿ.ಸಿ.ಟಿ ಬಾಲಸ್ವಾಮಿ, ಉಪಾಧ್ಯಕ್ಷರಾದ ಎಂ.ಜಿ.ರಾಜಗೋಪಾಲ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಅರುಣ್ ಪಡಿಯಾರ್ ಎನ್, ಖಜಾಂಚಿ ಹೆಚ್.ಕೆ ಮಲ್ಲೇಶಗೌಡ, ಯಾದಗಿರಿ ಜಿಲ್ಲೆ ಅಭಿವೃದ್ಧಿ ಸಮಿತಿಯ ಉಪ ಸಮಿತಿ ಅಧ್ಯಕ್ಷರಾದ ಭೀಮಾಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.