ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.4 : ಸ್ವ ಉದ್ಯೋಗದಿಂದ ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಜೀವನ ಹಸನಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಸೋಮಶೇಖರ್ತಿಳಿಸಿದರು.
ಹೊಸಕೋಟೆ ತಾಲೂಕು ಮಲ್ಲಿಮಾಕನಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಉತ್ಪನ್ನ ಮತ್ತು ಉಪಕಸುಬಗಳು ಗ್ರಾಮೀ ರೈತಾಪಿ ವರ್ಗದ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿರುತ್ತವೆ. ಪ್ರಧಾನಮಂತ್ರಿಯವರ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿಯಲ್ಲಿ ತರಬೇತಿ ಹಾಗೂ ಸಾಲಸೌಲಭ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆಯ ಕೃಷಿ ಮೇಲ್ವಿಚಾರಕ ಚೇತನ್ ಮಾತನಾಡಿ, ಸ್ವ ಉದ್ಯೋಗ ತರಬೇತಿಯಲ್ಲಿ ಅಣಬೆ, ಜೇನು, ಹಪ್ಪಳ, ಉಪ್ಪಿನಕಾಯಿ ತಯಾರಿಕೆ ಮಾಡುವುದರ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಿ ಧರ್ಮಸ್ಥಳ ಸಂಘದ ಪ್ರಗತಿ ಬಂಧು ಹಾಗೂ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಲಾಗುವುದು. ಇದರಿಂದ ವ್ಯವಹಾರಿಕವಾದ ಚೇತರಿಕೆ ಕಾಣಬಹದು. ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶಗಳು ಸಹ ಹೆಚ್ಚಾಗುತ್ತವೆ ಎಂದರು.