ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.5: ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗದ ತಪ್ಪು ಒಪ್ಪುಗಳನ್ನು ತಿದ್ದುವ ಕೆಲಸ ಪತ್ರಿಕಾಂಗದ ಕರ್ತವ್ಯವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಡಾ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 33 ನೇ ಸಮಾವೇಶ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆಲ ವರ್ಷಗಳ ಹಿಂದೆ ಶುರುವಾದ ಸಾಮಾಜಿಕ ಜಾಲತಾಣಗಳಿಂದ ಹಲವಾರು ಬಾರಿ ಸುಳ್ಳು ಸುದ್ದಿಗಳ ಪ್ರಸಾರ ಪತ್ರಿಕಾ ಮಾದ್ಯಮದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಹೊರ ದೇಶಗಳಲ್ಲಿ ಸುದ್ದಿ ಸಂಸ್ಥೆಗಳ ಪ್ರಸರಣದ ನೈಜ್ಯತೆಯ ತಪಾಸಣಾ ಕಮಿಟಿಗಳನ್ನು ಜಾರಿಮಾಡಲಾಗಿದೆ. ಇಂತಹ ವ್ಯವಸ್ಯೆ ನಮ್ಮ ದೇಶದಲ್ಲೂ ಜಾರಿಯಾದರೆ ಮಾತ್ರ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಧ್ಯ. ಸರ್ಕಾರದ ಮಾನ್ಯತೆ ಪಡೆದ ಸುದ್ದಿ ಸಂಸ್ಥೆಗಳು ಮಾತ್ರ
ಬೆಳವಣಿಗೆ ಕಾಣಲು ಸಾಧ್ಯ ಎಂದರು.
ಜಿಲ್ಲಾದ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಹಲವಾರು ವರ್ಷಗಳಿಂದ ತಾಲೂಕು ಪತ್ರಕರ್ತರ ಸಂಘವನ್ನು ಹಲವರು ತಮ್ಮ ಮುಂದಾಳತ್ವದಲ್ಲಿ ನೆಡೆಸಿಕೊಂಡು ಬಂದಿದ್ದು ಇಂದಿಗೂ ಉತ್ತಮವಾಗಿ ನೆಡೆದುಕೊಂಡು ಬಂದಿದೆ. ಪತ್ರಕರ್ತರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು ಎಂದರು.
ರಾಜ್ಯ ಕಾರ್ಯದರ್ಶಿ ಲೋಕೇಶ್ ಮಾತನಾಡಿ, 91 ವರ್ಷ ಗಳ ಹಿಂದೆ ಸ್ಥಾಪಿತವಾಗಿ ಇಂದಿಗೂ ಸರ್ಕಾರದ ಮಾನ್ಯತೆ ಪಡೆಯದ ಏಕೈಕ ಸಂಘ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದ ಅವರು, ಪತ್ರಿಕೆಗಳಲ್ಲಿ ಕೆಲಸ ಮಾಡುವ ನೈಜ ಪತ್ರಕರ್ತರನ್ನು ಗುರುತಿಸಿ ಬೈಲಾದ 21 ನಿಯಮಗಳಿಗೆ ಅನುಗುಣವಾಗಿದ್ದವರಿಗಷ್ಟೇ ನಮ್ಮ ಸಂಘದಲ್ಲಿ ಸದಸ್ಯತ್ವ ನೀಡಲಾಗುತಿದ್ದು, ನಿಯಮಗಳ ಪೂರ್ಣಗೊಳಿಸಲಾಗದವರು ಸಹಕಾರ ಸಂಘದಲ್ಲಿ ನೊಂದಾಯಿಸಿ ಬೇರೆ ಬೇರೆ ಹೆಸರುಗಳಲ್ಲಿ ಪತ್ರಕರ್ತರ ಸಂಘ ಸ್ಥಾಪಿಸುತಿದ್ದಾರೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಾಣ ಮಾಡಿಕೊಡಬೇಕು. ಜೊತೆಗೆ ನಿವೇಶನ ರಹಿತ ಪತ್ರಕರ್ತರಿಗೆ ಸರ್ಕಾರದ ಯೋಜನೆಗಳಲ್ಲಿ ನಿವೇಶನ ನೀಡಬೇಕಿದೆ. ಇದರ ಜೊತೆಗೆ ಪತ್ರಕರ್ತರಿಗೆ ಬೆನ್ನೆಲುಬಾಗಿರುವ ಪತ್ರಿಕಾ ವಿತರಕರು ಮುಂಜಾನೆ ಮಳೆ ಗಾಳಿ ಚಳಿ ಎಲ್ಲವನ್ನೂ ಬದಿಗೊತ್ತಿ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಕಾಯಕ ಮಾಡುತಿದ್ದು ಅವರನ್ನೂ
ಗುರುತಿಸಿ ಸರ್ಕಾರದ ಸವಲತ್ತು ಒದಗಿಸುವ ಕೆಲಸ ಅಗಬೇಕು.ಎಚ್ ಕೆ ಮಂಜುನಾಥ್, ಅದ್ಯಕ್ಷರು ಹೊಸಕೋಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘbತಾಲೂಕಿನಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ನಾನು ಬದ್ಧ. ನಿವೇಶನ ಗುರುತಿಸಿಕೊಡುವುದಾಗಿ ಪತ್ರಕರ್ತರು ತಿಳಿಸಿದ್ದಾರೆ. ಭವನಕ್ಕೆ ಜಾಗ ಹಾಗೂ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಜೊತೆಗೆ ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ಕೆಲ ದಿನಗಳ ಹಿಂದೆ ಸರ್ಕಾರಿ ನಿವೇಶನ ಹಂಚುವ ಸಂದರ್ಭದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಶೇ 5% ಮೀಸಲಾತಿಗೆ ಸಂಘಟನೆ ಒತ್ತಾಯ ಮಾಡಿದ್ದು, ಇದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಮಿತಿ ಕುಸುಮ, ಜಿಲ್ಲಾ ಉಪಾದ್ಯಕ್ಷ ಜಿ ಎಸ್ ಮಂಜುನಾಥ್, ಜ್ಯೋತೀಶ್ವರಪ್ಪ, ಕಾರ್ಯದರ್ಶಿ ರಮೇಶ್, ಖಜಾಂಚಿ ಶಾಂತಮೂರ್ತಿ, ತಾಲೂಕು ಉಪಾದ್ಯಕ್ಷ ಮಂಜುನಾಥ್, ದೇವಾರ್ಜುನ್, ಪ್ರಧಾನ ಕಾರ್ಯದರ್ಶಿ ಡಿ. ನಾಗರಾಜ್, ಕಾರ್ಯಕಾರಿ ಸಮಿತಿಯ ಸ್ವರೂಪ್, ಉದ್ಯಮಿ ಲೋಹಿತ್, ಸತೀಶ್ ಗೌಡ, ಮುಖಂಡರಾದ, ಎಚ್. ಎಂ. ಸುಬ್ಬರಾಜ್, ಗೋಪಿ, ಹರೀಶ್, ತಾಲುಕು ಕಸಾಪ ಅದ್ಯಕ್ಷ ಎಚ್. ಎಂ. ಮುನಿರಾಜ್ ಮೊದಲಾದವರು ಹಾಜರಿದ್ದರು.