ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಸೆ.5: ಮಕ್ಕಳ ಬಾಳಿನಲ್ಲಿ ಅರಿವಿನ ದೀಪವನ್ನು ಬೆಳಗಿಸಿದ ಶಿಕ್ಷಕರು ಮಾನವ ಜನಾಂಗಕ್ಕೆ ದಾರಿದೀಪವಿದ್ದಂತೆ. ಸರ್ವಪಲ್ಲಿ ರಾಧಾಕೃಷ್ಣನ್ ಸ್ವತಃ ಶಿಕ್ಷಕರಾಗಿದ್ದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಅವರು, ಆದರ್ಶ ಮತ್ತು ಶಿಸ್ತಿನ ಪ್ರತಿರೂಪವಾಗಿದ್ದರು. ಇಂತಹ ಗುಣವನ್ನು ಯುವ ಶಿಕ್ಷಕರು ಮೈಗೂಡಿಸಿಕೊಳ್ಳಬೇಕೆಂದು ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲದ ಅಧ್ಯಕ್ಷರಾ ವೆಂಕಟೇಶ್ವರಲು ತಿಳಿಸಿದರು.
ತಾಲೂಕಿನ ಸತ್ಯಸಾಯಿ ಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾಭವನದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಗುರು ವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರೂಪಿಸಿದ್ದು, ಇಂಪಾದ ಗಾಯನಗಳಿಂದ ಶಿಕ್ಷಕ ವೃಂದವನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳೇ ಶಿಕ್ಷಕ ವೃಂದಕ್ಕೆ ಬಗೆ ಬಗೆಯ ಕ್ರೀಡೆಗಳನ್ನು ಏರ್ಪಡಿಸಿ ಮನೋರಂಜನೆಯನ್ನು ಸಹ ಒದಗಿಸಿದರು. ವಿದ್ಯಾರ್ಥಿಗಳ ಪರವಾಗಿ ಇಂಡೋನೇಷ್ಯಾದ ಬಾಲಿಯಿಂದ ಬಂದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದೇವಗಿರಿ ಯೋಗಾನಂದ ಮಾತನಾಡಿದರು. ಶಿಕ್ಷಕರ ಪರವಾಗಿ ವಿಶ್ವನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಗುರುಕುಲದ ಅಧ್ಯಕ್ಷರು ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ನೆನಪಿನ ಕಾಣಿಕೆ ಇತ್ತು ಗುರುವಂದನಾ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು. ಗುರುಕುಲದ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರಲು ಅವರಿಗೆ ಹಿರಿಯ ಶಿಕ್ಷಕರಾದ ಶ್ರೀ ಕೆ ವಾಸುದೇವರಾವ್ ಅವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗುರುಕುಲದ ಪ್ರಾಂಶುಪಾಲರಾದ ಶ್ರೀ ಚೇತನ್, ಕ್ಷೇಮ ಪಾಲಕರಾದ ಶ್ರೀನಿಕೇತನ್, ಸಹ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.