ಸುದ್ದಿಮೂಲ ವಾರ್ತೆ
ಮೈಸೂರು,ಸೆ.7:ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಗುರುವಾರ ರೈತರ ಹೋರಾಟವನ್ನು ವಕೀಲರು ಬೆಂಬಲಿಸಿದ್ದು, ಒಣಗಿದ ಕಬ್ಬಿನ ಜಲ್ಲೆಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದೇ ವೇಳೆ ರೈತರು ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದಾರೆ.
ರೈತರ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ ಮಂಡ್ಯ ವಕೀಲರ ಸಂಘ, ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ನ್ಯಾಯಾಲಯದ ಕಲಾಪ ಭಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಚಂದ್ರೇಗೌಡ, ಖಜಾಂಚಿ ವಿನಯ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಹಿರಿಯ , ಕಿರಿಯ ಸದಸ್ಯರ ನೇತೃತ್ವದಲ್ಲಿ ಪ್ರತಿಭಟಿಸಿದರು.
ನ್ಯಾಯಾಲಯದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಕಬ್ಬಿನ ಜಲ್ಲೆ ಪ್ರತಿಭಟನೆ : ಶ್ರೀರಂಗಪಟ್ಟಣದಲ್ಲಿ ರೈತರು ಒಣಗಿದ ಕಬ್ಬಿನ ಜಲ್ಲೆ ಹಿಡಿದು ಪ್ರತಿಭಟನೆ ನಡೆಸಿದರು. ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿಯಿಂದ ಕಬ್ಬಿನ ಜೊಲ್ಲೆ ಹಿಡಿದು ತಾಲ್ಲೂಕು ಕಚೇರಿವರಗೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಮೂಹಿಕ ಆತ್ಮಹತ್ಯ : ತಾಲ್ಲೂಕು ಕಚೇರಿ ಎದುರು ಒಂದು ಘಂಟೆಗೂ ಅಧಿಕ ಸಮಯ ಪ್ರತಿಭಟನೆ ನಡೆಸಿದರು. ನಮ್ಮ ನೀರನ್ನು ರಕ್ಷಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಒಂದು ವೇಳೆ ಮಳೆಯೇನಾದರೂ ಆಗದಿದ್ದರೆ ಮುಂದಿನ ದಿನಗಳಲ್ಲಿ ರೈತರೆಲ್ಲರೂ ಸಾಮೂಹಿಕ ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.