ದೇವನಹಳ್ಳಿ,ಸೆ.9:ಮನುಷ್ಯ ರಕ್ತದಾನ ಮಾಡುವುದರಿಂದ ಆರೋಗ್ಯಕರವಾಗಿರಲು ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಜೇಸಿಐ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಸರ್ಕಲ್ನಲ್ಲಿ ಜೇಸಿಐ ಚಪ್ಪರಕಲ್ಲು ಚಂದನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಸಚಿವ ಕೆ.ಎಚ್.ಮುನಿಯಪ್ಪ ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಎಷ್ಟೋ ಪ್ರಾಣಗಳನ್ನು ಉಳಿಸಿದಂತೆ ಆಗುತ್ತದೆ. ಇಂತಹ ಮಹತ್ವವಾದ ಕೆಲಸಕ್ಕೆ ಜೇಸಿಐ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗೌಡ ನೇತೃತ್ವದಲ್ಲಿ ಮಾಡುತ್ತಿರುವುದು ಶ್ಲಾಘನೀಯವಾದದ್ದು, ಕಾರ್ಯಕ್ರಮ ಉತ್ತಮವಾಗಿ ನಡೆಯಲಿ, ಪ್ರತಿಯೊಬ್ಬರು ಭಾಗಿಯಾಗುವುದರ ಮೂಲಕ ಇಂತಹ ಮಹತ್ವದ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಜೇಸಿಐ ಚಪ್ಪರಕಲ್ಲು ಘಟಕದ ಅಧ್ಯಕ್ಷ ಶಿವಾಜಿಗೌಡ ಮಾತನಾಡಿ, ಜೈತ್ರಾ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಇಂದಿನಿಂದ 7 ದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತದೆ. ಚಪ್ಪರಕಲ್ಲು ಸರ್ಕಲ್ ಜಿಲ್ಲಾಡಳಿತ ಭವನದ ಕೇಂದ್ರವಾಗಿರುವುದರಿಂದ ಇಲ್ಲಿನ ಸರ್ಕಲ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ಪಾಸ್ ಅಥವಾ ಸ್ಕೈ ವಾಕರ್ ಸೇವೆಯನ್ನು ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.
ರಕ್ತದಾನ ಶಿಬಿರದಲ್ಲಿ ವಿಶ್ವನಾಥಪುರ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಕೆ.ಶ್ರೀನಿವಾಸ್ ಹಾಗು ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಅಭಿನಂದನೆಗೆ ಪಾತ್ರರಾದರು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸಂಸ್ಥೆಯ ಅಧ್ಯಕ್ಷ ಜೆಎಫ್ಎಂ ಶಿವಾಜಿಗೌಡ ವಹಿಸಿದ್ದರು. ಈ ವೇಳೆ ಜೇಸಿಐ ಚಪ್ಪರಕಲ್ಲು ಚಂದನ ಘಟಕದ ಸಂಸ್ಥಾಪಕ ನೆರಗನಹಳ್ಳಿ ಶ್ರೀನಿವಾಸ್, ನಿಯೋಜಿತ ಘಟಕ ಅಧ್ಯಕ್ಷ ಅಕ್ಷಯ್, ಗ್ರಾಪಂ ಸದಸ್ಯರಾದ ಮಮತಾಶಿವಾಜಿ, ಮೀನಾಕ್ಷಿಕೃಷ್ಣಮೂರ್ತಿ, ಜೇಸಿಐನ ಲೋಕೇಶ್, ರವಿ ಕೆಂಪೇಗೌಡ್ರು, ಪದಾಧಿಕಾರಿಗಳು, ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡ, ಸಾರ್ವಜನಿಕರು ಇದ್ದರು.