ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ ,ಸೆ.9 : ಮನುಷ್ಯರ ಶಾರೀಕರಚನೆಯು ಜೈವಿಕವಾಗಿ, ವೈಜ್ಞಾನಿಕವಾಗಿ ರೂಪುಗೊಂಡಿದ್ದು, ನಿಯಮಿತ ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಜೀವನ ಶೈಲಿಯಿಂದ ಕ್ರಿಯಾಶೀಲ ಸಧೃಡ ಶರೀರ ಹಾಗೂ ಆರೋಗ್ಯವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಪೆರೇಸಂದ್ರದ ಶಾಂತಾ ಫಿಸಿಯೋಥೆರಪಿ ಕಾಲೇಜಿನ ವತಿಯಿಂದ “ಸಂಧಿವಾತ ಒಂದು ಜಾಗತಿಕ ಸಮಸ್ಯೆ” ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಗೋಷ್ಠಿಯನ್ನ ಉದ್ಘಾಟಿಸಿ ಮಾತನಾಡಿದರು.
ಸಂಧಿವಾತ ಮತ್ತು ಕೀಲುನೋವುಗಳನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಹಾಗೂ ಜೀವನಕ್ರಮ ರೂಪಿಸಿಕೊಳ್ಳಬೇಕು. ಶಾರೀರಿಕವಾಗಿ ಯಾವುದೇ ರೀತಿಯ ನೋವು ಅಥವಾ ನಿಶ್ಚೇತನ ಕಂಡುಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆಯುವುದು ಮುಖ್ಯ ಫಿಸಿಯೋಥೆರಪಿ ಕೋರ್ಸ್ನ ತರಬೇತಿ ವಿದ್ಯಾರ್ಥಿಗಳು ಈ ಬಗೆಗಿನ ಪಠ್ಯ ಅಂಶಗಳ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸೆಯ ನಿಯಮಗಳನ್ನು ಪ್ರಾಯೋಗಿಕವಾಗಿ ಅರಿಯುವುದರಿಂದ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸುವಂತಾಗಬೇಕು ಎಂದರು.
ಮೂಳೆ ಮತ್ತು ಕೀಲು ತಜ್ಞರಾದ ಡಾ. ಬಿ.ಎಸ್.ನರೇಂದ್ರ ವಿಷಯ ಮಂಡಿಸಿ ಸಂಧಿವಾತ, ಕೀಲುನೋವುಗಳಿಗೆ ಕಾರಣಗಳು, ಚಿಕಿತ್ಸೆ ಮತ್ತು ಅನುಸರಿಸಬೇಕಾದ ಜೀವನ ಕ್ರಮಗಳು ಹಾಗೂ ದೈಹಿಕ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ದೃಷ್ಟಾಂತಗಳೊಂದಿಗೆ ಪ್ರಸ್ತಾಪ ಮಾಡಿದರು.
ಹಾಸ್ಮೆಟ್ ಫಿಸಿಯೋಥೆರಪಿ ಕಾಲೇಜಿನ ಪ್ರೊ. ಪಿ.ಸೆಂಥಿಲ್ಕುಮಾರ್ ಭೌತಿಕ ಫಿಸಿಯೋಥೆರಪಿ ತರಬೇತಿಯ ವಿವಿಧ ಚಟುವಟಿಕೆಗಳು ಹಾಗೂ ಸಹಜ ಚಿಕಿತ್ಸೆಗಳು, ಸಲಕರಣೆಗಳು ಹಾಗೂ ಮಸಾಜ್ ಮಾಡುವ ತಂತ್ರಗಳ ಬಗ್ಗೆ ಪ್ರದರ್ಶನಾತ್ಮಕವಾಗಿ ವಿವರಗಳನ್ನು ನೀಡಿದರು.
ಪ್ರಾಂಶುಪಾಲ ಡಾ. ನವೀನ್ ಸೈಮನ್ ಮಾತನಾಡಿ ಫಿಸಿಯೋಥೆರಪಿ ತರಬೇತಿ ಶಿಕ್ಷಣದ ಪ್ರಾಮುಖ್ಯತೆಯನ್ನು ವೈದ್ಯಕೀಯ ದೃಷ್ಟಾಂತಗಳ ಮೂಲಕ ಪ್ರಸ್ತುತಪಡಿಸುತ್ತಾ ಫಿಸಿಯೋಥೆರಪಿ ಚಿಕಿತ್ಸಾಕ್ಷೇತ್ರದಲ್ಲಿಆಗುತ್ತಿರುವ ನವೀನ ಉಪಕ್ರಮಗಳನ್ನು ತರಬೇತಿ ಅವಧಿಯಲ್ಲಿ ಕಲಿತು ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಶಾಂತಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನ್ ಕುಮಾರ್, ಡಾ.ಆಯಿಷಾ ಭಟ್, ಡಾ.ಡಯಾನ, ಜಾಹೀದ್, ವ್ಯಾಲೆಂಟೇನ್ ಮತ್ತುಮಂಡಿಕಲ್ಲು ಸರ್ಕಾರಿಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಗಿಣಿ ಮೊದಲಾದವರು ಪಾಲ್ಗೊಂಡಿದ್ದರು.