ಕೆ.ಆರ್.ಪುರದ ಸುತ್ತಮುತ್ತಲಿನ ಪ್ರದೇಶಗಳ ರಾಮಮೂರ್ತಿನಗರ, ಕಲ್ಕೆರೆ, ಹೊರಮಾವು, ಎನ್.ಆರ್.ಐ.ಬಡಾವಣೆ ಹಾಗೂ ಮಹದೇವಪುರದ ಬೆಳ್ಳಂಡೂರು, ಬೈರತಿ, ಕಾಡುಬಿಸನಹಳ್ಳಿ, ತುಬರಹಳ್ಳಿ, ಮುನ್ನೆಕೊಳಲು, ಬೆಳ್ಳಂಡೂರು ಅಂಬಲಿಪುರ, ದೊಡ್ಡಕನ್ನಹಳ್ಳಿ, ಹರಳೂರು, ಕಸವನಹಳ್ಳಿ, ಬೋಗನಹಳ್ಳಿ, ವರ್ತೂರು ಮುಂತಾದ ಭಾಗಗಳಲ್ಲಿ ನೀರಿನ ಬವಣೆ ಹೆಚ್ಚಿದೆ.
ಮಳೆಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಅಂತರ್ಜಲ ಕುಸಿತ ಕಂಡಿರುವ ಕಾರಣವಾಗಿದೆ. ಕೆ.ಆರ್.ಪುರ ಮತ್ತು ಮಹದೇವಪುರ ವ್ಯಾಪ್ತಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ ಮನೆಮನೆ ನೀರು ಒದಗಿಸುವ ಯೋಜನೆಯಾದ ಕಾವೇರಿ ನೀರಿನ ಯೋಜನೆ ಪೂರ್ಣಗೊಳ್ಳದೆ ಇರುವುದು ನೀರು ಸಮಸ್ಯೆ ಉಂಟಾಗಲು ಕಾರಣವಾಗಿದೆ.
ಒಂದೆಡೆ ಕೊಳವೆಬಾವಿಗಳ ನೀರಿಲ್ಲದೆ ಇತ್ತ ಕಾವೇರಿ ನೀರಿಲ್ಲದೆ ಅನಿವಾರ್ಯವಾಗಿ ಒಂದು ಟ್ಯಾಂಕರ್ ಗೆ 500ರಿಂದ 600 ರೂ ಹಣ ಕೊಟ್ಟು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಈಗ ಟ್ಯಾಂಕರ್ ನೀರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ, ಇದ್ದಕ್ಕಿದ್ದಂತೆ ಟ್ಯಾಂಕರ್ ನೀರಿನ ಬೆಲೆ ಹೆಚ್ಚಾಗಿರುವುದು ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಹಲವು ಕಡೆಗಳು ಕೊಳವೆಬಾವಿಗಳಲ್ಲಿ ನೀರಿಲ್ಲದೆ ಕೆಟ್ಟು ನಿಂತಿರುವ ಪರಿಣಾಮ ನೀರಿನ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ ಎಂದು ಪೂಜಾ ಗಾರ್ಡನ್ ನಿವಾಸಿ ಮಂಜುಳಾ ಹೇಳಿದರು.
ಬಿಬಿಎಂಪಿ ಅಧಿಕಾರಿಗಳು ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳದೆ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹದಿನೈದು ದಿನಗಳಿಂದ ನಮ್ಮ ಬಡಾವಣೆಗಳಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ನೀರಿನ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗುತ್ತಿಲ್ಲ ಎಂದರು.
ಕೆಲ ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕೆಲವೊಂದು ಬಡಾವಣೆಗಳಿಗೆ ಮಾತ್ರ ನೀರು ಬಿಡುತ್ತಿದ್ದಾರೆ. ಬೇರೆ ವಿಧಿಯಿಲ್ಲದೆ ಟ್ಯಾಂಕರ್ ನೀರು ಖರೀದಿಸುವ ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಕೊಳವೆಬಾವಿಗಳಲ್ಲಿ ನೀರು ಬತ್ತಿದ ಪರಿಣಾಮ ನೀರಿನ ಸಮಸ್ಯೆ ಉಂಟಾಗಿದೆ ಅದಷ್ಟು ಬೇಗ ನೀರಿನ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಮಾಡಬೇಕಿದೆ ಎಂದು ಮುನ್ನೆಕೊಳಲು ನಿವಾಸಿ ದಿಲೀಪ್ ಹೇಳಿದರು.
ಸಾರ್ವಜನಿಕರಿಗೆ ಕುಡಿಯುವ ನೀರು ದೊರಕದಿರುವ ಕುರಿತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೊಳವೆ ಬಾವಿಗಳು ಬತ್ತುವ ಸ್ಥಿತಿಗೆ ಬಂದಿವೆ. ಟ್ಯಾಂಕರ್ ನೀರಿಗೆ ಮೊರೆ ಹೋಗಿರುವ ಜನರು ದುಂದು ವೆಚ್ಚ ಮಾಡಿ ನೀರು ಖರೀದಿಸುತ್ತಿದ್ದಾರೆ. ಇನ್ನೂ ಕೆಲದಿನಗಳಲ್ಲಿ ಇರುವ ಕೆಲವು ಕೊಳವೆ ಬಾವಿ ನೀರು ಬತ್ತಿದರೆ ಟ್ಯಾಂಕರ್ ನೀರು ಸರಬರಾಜು ನಿಲ್ಲುತ್ತದೆ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಮಹದೇವಪುರ, ಅಪ್ ಮುಖಂಡ ಮುನೇಂದ್ರ, ಹೇಳಿದರು.