ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಸೆ.10:ಕ್ಯಾಲಸನಹಳ್ಳಿ ಪೂರ್ವ ಫಾಮ್ ಬೀಚ್ ವಸತಿ ಸಮುಚ್ಚಯದ ನಿವಾಸಿಗಳು ಸಾಂಪ್ರದಾಯಿಕ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪೂರ್ವ ಫಾಮ್ ಬೀಚ್ ಕೇರಳ ಸಾಂಸ್ಕೃತಿಕ ಸಮಿತಿ ವತಿಯಿಂದ ವಸತಿ ಸಮುಚ್ಚಯ ಆವರಣದಲ್ಲಿ ಆಯೋಜಿಸಲಾಗಿದ್ದ ಓಣಂ ಹಬ್ಬ ಪ್ರಯುಕ್ತ ಚಂಡೆ ಮೇಳ, ಮನರಂಜನೆ, ಸಂಗೀತ, ಗೀತೆ ಗಾಯನ, ಮೇಗಾ ತಿರುವಾತೀರಾ ನೃತ್ಯ ಪ್ರದರ್ಶನ, ವಿವಿಧ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬಿಡುವಿಲ್ಲದೆ ಸದಾ ಕೆಲಸದ ಒತ್ತಡದ ನಡುವೆ ಬ್ಯುಸಿಯಾಗಿರುತ್ತಿದ್ದ ವಸತಿ ಸಮುಚ್ಚಯ ನಿವಾಸಿಗಳಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಣ್ಣ ಮಕ್ಕಳಿಂದ ಹಿಡಿದು, ಮಹಿಳೆಯರು ಸೇರಿದಂತೆ ಹಿರಿಯ ನಾಗರೀಕರು ಹಬ್ಬದ ಪ್ರಯುಕ್ತ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಹಿಳೆಯರು ಸಾಂಪ್ರದಾಯಿಕ ಉಡುಗೆ ಗಮನ ಸೆಳೆಯಿತು. ಪೂರ್ವ ಫಾಮ್ ಬೀಚ್ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಘನಶ್ಯಾಮ್ ಮಾತನಾಡಿ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹೊಂದಿರುವ ಓಣಂ ಹಬ್ಬವನ್ನು ಪ್ರತಿವರ್ಷ ಧಾರ್ಮಿಕವಾಗಿ ಹಬ್ಬವಾಗಿ ಆಚರಣೆ ಮಾಡುವ ಪಧ್ಧತಿ ರೂಢಿಯಲ್ಲಿದೆ. ನೆಲದ ಸಂಸ್ಕೃತಿ ಬೆಳಸಿ ಉಳಿಸುವ ನಿಟ್ಟಿನಲ್ಲಿ ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಆಚರಣೆ ಮಾಡಿಕೊಂಡಿರುವ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಎಲ್ಲಾ ಭಾಷೆ ಧರ್ಮದವರು ಒಂದಾಗಿ ಈ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಅಯೋಜನೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಘನಶ್ಯಾಮ್, ಪಿಪಿಬಿ ಕೇರಳ ಸಾಂಸ್ಕೃತಿಕ ಸಮಿತಿಯ ಶಿಜು ಥಾಮಸ್, ದಿಲೀಪ್ ಮೋಹನ್, ಖ್ಯಾತ ಯೂಟ್ಯೂಬರ್ ಜೋರ್ಡಿಂಡಿಯನ್ ಹಾಗೂ ವಸತಿ ಸಮುಚ್ಚಯದ ನಿವಾಸಿಗಳು ಇದ್ದರು.