ಸುದ್ದಿಮೂಲ ವಾರ್ತೆ
ಆನೇಕಲ್, ಸೆ. 10 : ಕೊಳೆತು ನಾರುತ್ತಿದ್ದ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ಖಾಲಿ ಮತ್ತು ಸ್ವಚ್ಚವಾಗಿದ್ದ ಸ್ಥಳಕ್ಕೆ ವರ್ಗಾಯಿಸಿ ಸುತ್ತಲಿನ ನಿವಾಸಿಗಳಿಗೆ ಶಾಂತಿಪುರ ಗ್ರಾಮ ಪಂಚಾಯಿತಿ ಗಬ್ಬು ನಾರುವ ವಾಸನೆ ತಂದೊಡ್ಡಿದೆ.
ರಾಯಸಂದ್ರ ಗ್ರಾಮದ ದೊಡ್ಡಾಮರ ರಸ್ತೆಯಲ್ಲಿ ವರ್ಷಗಳಿಂದ ವಿಲೇವಾರಿಯಾದೆ ಬಿದ್ದಿದ್ದ ಕಸವನ್ನು ಅದೇ ರಸ್ತೆಯಲ್ಲಿ ಸ್ವಚ್ಚವಾಗಿದ್ದ ಸ್ಥಳಕ್ಕೆ ತಂದು ಸುರಿಯುವ ಮೂಲಕ ಮತ್ತೊಂದೆಡೆ ಮತ್ತಷ್ಟು ನಿವಾಸಿಗಳಿಗೆ ತೊಂದರೆ ಉಂಟುಮಾಡಲಾಗಿದೆ.
ಶಾಂತಿಪುರ ಗ್ರಾಮ ಪಂಚಾಯಿತಿ ವತಿಯಿಂದ ರಾಯಸಂದ್ರದ ಸರ್ಜಾಪುರ ರಸ್ತೆಗೆ ಸಂಪರ್ಕಿಸುವ ದೊಡ್ಡಾಮರ ರಸ್ತೆ ಮೊದಲೇ ರಸ್ತೆ ಸರಿಇಲ್ಲದೇ ಸಾರ್ವಜನಿಕರು ಕಲ್ಲು, ಮಣ್ಣು ಹಾಗೂ ಧೂಳಿನಿಂದ ಕೂಡಿರುವ ರಸ್ತೆ ಮೇಲೆಯೇ ಸಂಚರಿಸುವಂತಹ ಸ್ಥಿತಿ. ಅದರ ಜೊತೆಗೆ ಇದೀಗ ಕಸದ ರಾಶಿ ರಾಶಿಯನ್ನು ತಂದು ಸುರಿಯುತ್ತಿದೆ. ಅಕ್ಕಪಕ್ಕದಲ್ಲಿ ಲೇಔಟ್ ಗಳಿದ್ದು, ಅಲ್ಲಿ ಜನ ವಾಸಿಸುತ್ತಿದ್ದಾರೆ. ಎಲ್ಲೋ ಇದ್ದು ಕೊಳೆತು ಗಬ್ಬು ನಾರುತ್ತಿದ್ದ ಕಸವನ್ನು ತಂದು ಸುರಿಯುವ ಮೂಲಕ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.
ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಮಕ್ಕಳು ವಾಸಿಸುತ್ತಿದ್ದಾರೆ. ವಾಸನೆ ಬರುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಂ ಉಂಟಾಗುವ ಆತಂಕ ಕಾಡುತ್ತಿದೆ. ಶಾಂತಿಪುರ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೂ ಸೂಕ್ತ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಸರ್ಕಾರಿ ಜಾಗವೆಂದು ಎಲ್ಲೆಂದರಲ್ಲಿ ಕಸ ಹಾಕುವುದು ಸರಿಯೇ ಎಂಬುದುಪ್ರಶ್ನೆ.