ಸುದ್ದಿಮೂಲ ವಾರ್ತೆ
ಸೆ. 10 : ಫಾರ್ಮಸಿಯೊಂದಕ್ಕೆ ನುಗ್ಗಿದ್ದ ಕಳ್ಳರು ಸಿಬ್ಬಂದಿಗೆ ಚಾಕುವಿನಿಂದ ಇರಿದು ಐವತ್ತು ಸಾವಿರಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟದ ಗೊಟ್ಟಿಗೆರೆ ಸಮೀಪ ನಡೆದಿದೆ. ವಿಘ್ನೇಶ್ ಎಂಬ ಫಾರ್ಮಸಿ ಸಿಬ್ಬಂದಿ ಇರಿತಕ್ಕೊಳಗಾಗಿದ್ದಾರೆ.
ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಫಾರ್ಮಸಿಗೆ ನುಗ್ಗಿದ ಕಳ್ಳರು ಸಿಬ್ಬಂದಿಗೆ ಚಾಕುವಿನಿಂದ ಇರಿದು ಕ್ಯಾಶ್ ಕೌಂಟರ್ ನಲ್ಲಿದ್ದ ಹಣ ದೋಚಿ ಪಾರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಗೊಟ್ಟಿಗೆರೆ ಪೊಲೀಸರು ಭೇಟಿ ನೀಡಿ ಫಾರ್ಮಸಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.